ಜಿಲ್ಲೆ

ದಯಾಮರಣಕ್ಕೆ ಸಮ್ಮತಿ ಕೋರಿದ ಅನ್ನದಾತರು

Davangere - Desk - Mahesh Babu E

ಮೊಳಕಾಲ್ಮೂರು: ತೋಟದ ಮನೆಗಳಿಗೆ ಕರೆಂಟ್ ಕೊಡಲು ನಿರಾಕರಿಸುತ್ತಿರುವ ಸರ್ಕಾರದ ವರ್ತನೆಗೆ ಬೇಸೆತ್ತಿರುವ ಅನ್ನದಾತರು, ರಾಜ್ಯಪಾಲರಿಗೆ ದಯಾಮರಣಕ್ಕೆ ಸಮ್ಮತಿ ನೀಡುವಂತೆ ಕೋರಿದ್ದಾರೆ.

ರೈತಸಂಘದ ನೇತೃತ್ವದಲ್ಲಿ ತಾಲೂಕು ಆಡಳಿತ ಸೌಧದ ಬಳಿ ಸೋಮವಾರ ಧರಣಿ ನಡೆಸಿದ ಕೃಷಿಕರು, ಸಂಘದ ಪದಾಧಿಕಾರಿಗಳು, ಕೃಷಿ ಪಂಪ್‌ಸಟ್ ಹಾಗೂ ತೋಟದ ಮೆನಗಳಿಗೆ ವಿದ್ಯುತ್ ಪೂರೈಕೆಯಲ್ಲಿ ಆಗುತ್ತಿರುವ ಸಮಸ್ಯೆ ಕುರಿತು ಅಳಲು ತೋಡಿಕೊಂಡರು.

ಕೃಷಿಯನ್ನೇ ನಂಬಿ ಬದುಕು ಕಟ್ಟಿಕೊಂಡಿರುವ ನಾವು ಸಂಕಷ್ಟದ ಮಧ್ಯೆಯೂ ದೇಶಕ್ಕೆ ಆಹಾರ ಪೂರೈಕೆಗೆ ಆಧಾರಸ್ಥಂಭವಾಗಿದ್ದೆವೆ. ಆದರೆ, ನಾವು ಕೃಷಿ ಚಟುವಟಿಕೆ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ಸಮಸ್ಯೆ ಆಗುವ ರೀತಿ ವಿದ್ಯುತ್ ಪೂರೈಕೆಗೆ ಕಡಿವಾಣ ಹಾಕಲಾಗುತ್ತಿದೆ. ಇದರಿಂದ ಕೃಷಿ ಹಾಗೂ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಮಸ್ಯೆ ಆಗಿದೆ ಎಂದರು.

ಚಿತ್ರದುರ್ಗ ಜಿಲ್ಲೆ ಯಾವುದೇ ನದಿ ಮೂಲಗಳಿಲ್ಲದ ಬಯಲುಸೀಮೆ ಪ್ರದೇಶ. ಮಳೆಯನ್ನೇ ನಂಬಿರುವ ಕೃಷಿಕರು ವಾಸ ಮಾಡುತ್ತಿರುವ ತೋಟದ ಮನೆಯಲ್ಲಿ ಸಂಜೆ 6ರಿಂದ 10 ಗಂಟೆವರೆಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸುವುದು ಅತ್ಯಂತ ಅಪಾಯಕಾರಿ. ಒಂದೆಡೆ ಮಕ್ಕಳ ಶಿಕ್ಷಣಕ್ಕೆ ಸಮಸ್ಯೆ ಎದುರಾದರೆ, ಮತ್ತೊಂದು ಕಡೆ ವಿಷಜಂತುಗಳ ಭೀತಿ. ಈ ನಮ್ಮ ಸಮಸ್ಯೆ ಅರಿತು ಗುಣಮಟ್ಟದ ವಿದ್ಯುತ್ ಪೂರೈಕೆಗೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಒಂದೆಡೆ ಮಳೆ ಕೈಕೊಟ್ಟಿದ್ದು, ಮತ್ತೊಂದೆಡೆ ಬೆಳೆ ಉಳಿಸಿಕೊಳ್ಳಲು ಕೊಳವೆಬಾವಿ ಅವಲಂಭಿಸಿರುವ ನಮಗೆ ವಿದ್ಯುತ್ ಕಣ್ಣಾಮುಚ್ಚಲೆ ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ. ಜತೆಗೆ ದಶಕದಿಂದಲೂ ಸರಣಿ ರೀತಿ ನಷ್ಟ ಅನುಭವಿಸುತ್ತಿರುವ ನಮಗೆ ಬದುಕು ಸಾಕಾಗಿದೆ. ಆದ್ದರಿಂದ ರಾಜ್ಯಪಾಲರು ಕೂಡಲೇ ದಯಾಮರಣಕ್ಕೆ ಸಮ್ಮತಿ ನೀಡಿ ಸಾವಿನ ಮೂಲಕ ನೆಮ್ಮದಿ ಕಂಡುಕೊಳ್ಳಲು ಅವಕಾಶ ನೀಡಬೇಕು ಎಂದು ರೈತರು ಕೋರಿದರು.

ರೈತ ಸಂಘದ ತಾಲೂಕಾಧ್ಯಕ್ಷ ರವಿಕುಮಾರ, ಕಾರ್ಯದರ್ಶಿ ಮಂಜುನಾಥ, ರಾಜ್ಯ ಉಪಾಧ್ಯಕ್ಷ ಬೇಡರಡ್ಡಿಹಳ್ಳಿ ಬಸವರಡ್ಡಿ, ಎಚ್.ಟಿ.ಚಂದ್ರಣ್ಣ, ನಿಂಗಣ್ಣ, ಕನಕ ಶಿವಮೂರ್ತಿ, ಈರಣ್ಣ, ಕೃಷ್ಣಮೂರ್ತಿ, ಬಸವರಾಜ್, ಪಾಲಯ್ಯ, ದೊಡ್ಡಯ್ಯ, ತಿಪ್ಪೇಸ್ವಾಮಿ ಇತರರಿದ್ದರು.

ಆಹಾರ ಉತ್ಪಾದನೆ ಕುಸಿತ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಯಿಂದ ಆಹಾರ ಉತ್ಪಾದನೆ ಕಡಿಮೆ ಆಗುತ್ತಿದೆ. ಮತ್ತೊಂದು ದೇಶದಿಂದ ಆಹಾರ ಆಮದು ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಕೂಡಲೇ ಇಂತಹ ಸಂಕಷ್ಟಕ್ಕೆ ಕಡಿವಾಣ ಹಾಕಲು ಕೃಷಿ ಕ್ಷೇತ್ರ ಬಲವರ್ಧನೆಗೆ ಯೋಜನೆ ರೂಪಿಸಬೇಕು.-ಬೇಡರಡ್ಡಿಹಳ್ಳಿ ಬಸವರಡ್ಡಿ, ಉಪಾಧ್ಯಕ್ಷ, ರಾಜ್ಯ ರೈತಸಂಘ

ಜನಪ್ರತಿನಿಧಿಗಳ ಮೌನ ಸಲ್ಲದು: ಜಿಲ್ಲೆಯಲ್ಲಿ ಬರದ ತಾಪ ತಾಂಡವಾಡುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಅಥವಾ ಸ್ಥಳೀಯ ಶಾಸಕರು ಮೌನವಹಿಸಿರುವುದು ಕೃಷಿಕರ ಗಾಯದ ಮೇಲೆ ಬರೆ ಎಳೆಯುಂತಾಗಿದೆ. ರಾಜ್ಯಪಾಲರು ಕೂಡಲೇ ರೈತರ ಹಿತ ಕಾಯಲು ಮುಂದಾಗಬೇಕು.- ರವಿಕುಮಾರ, ತಾಲೂಕಾಧ್ಯಕ್ಷ, ರೈತಸಂಘ