ತರೀಕೆರೆ: ಉಳ್ಳವರು ಅಗತ್ಯ ನೆರವು ನೀಡಿದರೆ, ಬಡ ಮಕ್ಕಳ ಜತೆ ಅಶಕ್ತರ ಸಬಲೀಕರಣವೂ ಸುಲಭ ಎಂದು ಪಠ್ಯ ಪುಸ್ತಕ ರಚನಾ ಸಮಿತಿ ನಿವೃತ್ತ ನಿರ್ದೇಶಕಿ ಎಸ್.ಎನ್.ಲೀಲಾವತಿ ಹೇಳಿದರು.
ತಾಲೂಕಿನ ವಡ್ಡರದಿಬ್ಬ ಗ್ರಾಮದ ಸರ್ಕಾರಿ ಶಾಲೆಗೆ ಗ್ರೀನ್‌ಬೋರ್ಡ್, ಕ್ರೀಡಾ ಸಾಮಗ್ರಿ, ಕಲಿಕೋಪಕರಣ, ಗ್ರಂಥಾಲಯಕ್ಕೆ ಪುಸ್ತಕ, ವಾಟರ್‌ಫಿಲ್ಟರ್ ಸೇರಿ 60 ಸಾವಿರಕ್ಕೂ ಹೆಚ್ಚು ಮೌಲ್ಯದ ಇನ್ನಿತರ ಉಪಯುಕ್ತ ಪರಿಕರ ಕೊಡುಗೆ ನೀಡಿ ಮಾತನಾಡಿ, ಹಣ ಕೂಡಿಡುವ ಹವ್ಯಾಸ ಭವಿಷ್ಯದ ದೃಷ್ಠಿಯಿಂದ ಒಳ್ಳೆಯದಾದರೂ, ಸಂಪಾದನೆಯಿಂದ ಗಳಿಸುವ ಒಂದಿಷ್ಟು ಹಣ ಸತ್ಕಾರ್ಯಗಳಿಗೆ ಮೀಸಲಿಡುವುದು ಸಹ ಅತ್ಯುತ್ತಮ ಅಭ್ಯಾಸ ಎಂದರು. ಸರ್ಕಾರ ಶೈಕ್ಷಣಿಕ ವಲಯಕ್ಕೆ ಸಾಕಷ್ಟು ಅನುದಾನ ಬಳಕೆ ಮಾಡುತ್ತಿದ್ದು, ಇದರ ಸದ್ಬಳಕೆಯಾಗಬೇಕು. ದಾನಿಗಳು ಕೂಡ ಸರ್ಕಾರಿ ಶಾಲೆ ಮತ್ತು ಬಡ ಮಕ್ಕಳ ಕಲ್ಯಾಣಕ್ಕೆ ಅಗತ್ಯ ಸಹಕಾರ ನೀಡಬೇಕು ಎಂದು ಹೇಳಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಕೆ.ಎಂ.ಮಹೇಶ್, ಎಸ್‌ಡಿಎಂಸಿ ಸದಸ್ಯ ರಾಮಚಂದ್ರಪ್ಪ, ಮುಖ್ಯಶಿಕ್ಷಕಿ ಬಿ.ಎಸ್.ಶ್ವೇತಾರಾಣಿ, ದಾನಿ ರಾಜೇಶ್, ಗ್ರಾಮಸ್ಥ ಅರುಣ್ ಮತ್ತಿತರರಿದ್ದರು.