ಬುಕ್ಕಾಪಟ್ಟಣ : ಮಳೆಗಾಗಿ ಪ್ರಾರ್ಥಿಸಿ ತುಮಕೂರು ಜಿಲ್ಲೆ ಶಿರಾ ತಾಲೂಕಿನಲ್ಲಿ ತುಪ್ಪದ ಕೋಣ ಗೊಲ್ಲರಹಟ್ಟಿ ಗ್ರಾಮಸ್ಥರು ಗುರುವಾರ ಕತ್ತೆಗಳ ಮದುವೆ ಮಾಡಿಸಿದ್ದು, ಕಾಕತಾಳೀಯ ಎಂಬಂತೆ ರಾತ್ರಿಯೇ ಭರ್ಜರಿ ಮಳೆಯಾಗಿದೆ.
ವರುಣನ ಕೃಪೆಗಾಗಿ ಹತ್ತು ಹಲವು ರೀತಿಯ ಸಾಂಪ್ರದಾಯಿಕ ಪೂಜೆ ನೆರವೇರಿಸಿ ಕಾದುಕುಳಿತಿದ್ದ ಜನರಿಗೆ ಕೊನೆಗೂ ಆಶಯವನ್ನು ಈಡೇರಿಸಿದ್ದಾನೆ. ಮಳೆ ಇಲ್ಲದೆ ಈರುಳ್ಳಿ, ರಾಗಿ, ಶೇಂಗಾ ಹಾಳಾಗಿ ರೈತರು ಕಂಗಾಲಾಗಿದ್ದರು. ಕುರಿಗಳು, ಜಾನುವಾರುಗಳಿಗೆ ಮೇವು, ನೀರಿಲ್ಲದೆ ಪರದಾಡುತ್ತಿದ್ದರು. ಆದ್ದರಿಂದ ಕತ್ತೆಗಳನ್ನು ವಧು&ವರರಂತೆ ಸಿಂಗರಿಸಿ ಮನುಷ್ಯರ ಮದುವೆಯಲ್ಲಿ ಪಾಲಿಸಲಾಗುವ ಎಲ್ಲ ಸಂಪ್ರದಾಯ ಅನುಸರಿಸಿ ಮದುವೆ ಮಾಡಿಸಲಾಯಿತು. ಆ ಮೂಲಕ ದೇವರ ಕೃಪೆಯಿಂದ ಮಳೆಯಾಗಲಿ ಎಂದು ಪ್ರಾರ್ಥಿಸಿದರು. ಈ ನಿಮಿತ್ತ ಅನ್ನ ಸಂತರ್ಪಣೆಯನ್ನು ನೆರವೇರಿಸಲಾಯಿತು.
ಗಜೇಂದ್ರ, ಸುಬ್ಬಣ್ಣ, ಮಾರಗೊಂಡನಹಳ್ಳಿ ತುಪ್ಪದ ಕೋಣ ಗೊಲ್ಲರಹಟ್ಟಿ ಕರಿಯಣ್ಣ, ಮಹಾಲಿಂಗೇಗೌಡ, ಕುಂಬಾರಹಳ್ಳಿ ಶಾಂತಕುಮಾರ್, ಮಂಜುನಾಥ, ಗೊಲ್ಲರಹಟ್ಟಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರು, ಸ್ಥಳಿಯ ಜನಪ್ರತಿನಿಧಿಗಳು ಇದ್ದರು.