ಅಂಕೋಲಾ : ತಾಲೂಕಿನ ಡೊಂಗ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಮಾಜಿ ಉಪಾಧ್ಯಕ್ಷ ವಿನೋದ ಭಟ್ಟ ಉಪಾಧ್ಯಕ್ಷರಾಗಿ ಮಮತಾ ನಾಯ್ಕ ಆಯ್ಕೆಯಾಗಿದ್ದಾರೆ.
ತಾಲೂಕಿನ 21 ಗ್ರಾಮ ಪಂಚಾಯಿತಿಗಳಲ್ಲಿ 20 ರಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪೂರ್ಣಗೊಂಡಿತ್ತು.
ಜಿಲ್ಲಾಧಿಕಾರಿಗಳು ಪ್ರಕಟಿಸಿದ ಮೀಸಲಾತಿ ಪಟ್ಟಿ ಸಮಂಜಸವಾಗಿಲ್ಲ ಎಂದು ಸದಸ್ಯ ಮೋಹನ ಪಟಗಾರ ಹೈಕೋರ್ಟ್ ಮೊರೆ ಹೋಗಿದ್ದರು. ಹೀಗಾಗಿ ಡೋಂಗ್ರಿ ಪಂಚಾಯಿತಿ ಆಯ್ಕೆ ಪ್ರಕ್ರಿಯೆ ಮಾತ್ರ ಮುಂದೂಡಲ್ಪಟ್ಟಿತ್ತು.
ನ್ಯಾಯಾಲಯವು ಡೋಂಗ್ರಿ ಪಂಚಾಯಿತಿ ಆಯ್ಕೆ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿತ್ತು.
ತಡೆಯಾಜ್ಞೆ ತೆರವುಗೊಳಿಸುವಂತೆ ವಿನೋದ ಭಟ್ ಕೂಡ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ನಡೆದು ಆಗಸ್ಟ 16 ರಂದು ತಡೆಯಾಜ್ಞೆಯನ್ನು ತೆರವುಗೊಳಿಸಿತ್ತು.
ಇದನ್ನು ಪ್ರಶ್ನಿಸಿ ಅರ್ಜಿದಾರರು ಮತ್ತೆ ದ್ವಿಸದಸ್ಯ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದರು.
ಇದೀಗ ಅಲ್ಲಿಯೂ ಅರ್ಜಿ ವಜಾ ಆಗಿರುವದರಿಂದ ಸೆ.8 ರಂದು ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಅಧಿಸೂಚನೆ ಹೊರಡಿಸಿದ್ದರು.
ಇದನ್ನೂ ಓದಿ:ಎಟಿಎಂ ಬೂತ್ ಹ್ಯಾಕ್; 21 ಲಕ್ಷ ರೂ. ಕನ್ನ
ಅದೇ ಪ್ರಕಾರ ಶುಕ್ರವಾರ ಆಯ್ಕೆ ಪ್ರಕ್ರಿಯೆ ನಡೆದಿದೆ. ಒಟ್ಟು 11 ಸದಸ್ಯರಲ್ಲಿ ಓರ್ವ ಸದಸ್ಯರು ಗೈರು ಹಾಜರಾಗಿದ್ದರಿಂದ 10 ಸದಸ್ಯರಲ್ಲಿ ವಿನೋದ ಭಟ್ 6 ಮತ ಪಡೆದು ಗೆದ್ದಿರುತ್ತಾರೆ.
ಉಪಾಧ್ಯಕ್ಷ ಸ್ಥಾನಕ್ಕೆ ಮಾಜಿ ಅಧ್ಯಕ್ಷೆ ಲತಾ ಲೋಕೇಶ ನಾಯ್ಕ ಮತ್ತು ಮಮತಾ ನಾಯ್ಕ ನಡುವೆ ಸಮಬಲ ಕಂಡುಬಂದಿದ್ದರಿಂದ ಚೀಟಿ ಎತ್ತಲಾಗಿ ಮಮತಾ ನಾಯ್ಕ ಆಯ್ಕೆಯಾದರು.
ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.