ಅರಕಲಗೂಡು: ತಾಲೂಕಿನ ಹೊನ್ನೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಮಕ್ಕಳ ಮನೆ ಅಂಗನವಾಡಿ ಕೇಂದ್ರದಲ್ಲಿ ಸ್ಪರ್ಧಾತ್ಮಕ ಕಲಿಕಾ ಶಿಕ್ಷಣಕ್ಕೆ ಪೂರಕವಾದ ತಾಂತ್ರಿಕ ಪರಿಕರಗಳನ್ನು ಊರಿನ ಹಿರಿಯ ದಾನಿಗಳು ಕೊಡುಗೆಯಾಗಿ ನೀಡುವ ಮೂಲಕ ಸರ್ಕಾರಿ ಶಾಲೆ ಪ್ರಗತಿಗೆ ಕೈಜೋಡಿಸಿದ್ದಾರೆ.
ಗ್ರಾಮದ ವಿಷಕಂಠಾಚಾರ್ ಅವರ ಮೊಮ್ಮಕ್ಕಳಾದ ಪದ್ಮಾವತಿ ಜಯಕುಮಾರ್ ಅವರು ಹಾಸನದಲ್ಲಿ ನೆಲೆಸಿದ್ದು, ಇವರು ಹುಟ್ಟೂರಿನ ಶಾಲೆಗೆ ಸ್ಮಾರ್ಟ್ ಟಿವಿ, ಪ್ರೊಜೆಕ್ಟರ್ ಇತರ ಪರಿಕರಗಳನ್ನು ಕೊಡುಗೆಯಾಗಿ ನೀಡಿ ಶೈಕ್ಷಣಿಕ ಪ್ರಗತಿಗೆ ಉತ್ತೇಜಿಸಿದ್ದಾರೆ. ಅಲ್ಲದೆ, ಇತ್ತೀಚೆಗೆ ರಾಜ್ಯ ಸರ್ಕಾರದಿಂದಲೇ ಆಂಗ್ಲ ಮಾಧ್ಯಮದಲ್ಲಿ ಆರಂಭಗೊಂಡಿರುವ ಹೊನ್ನೇನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಗ್ರಾಮದ ದಿವಂಗತ ಲಕ್ಷ್ಮಮ್ಮ ಮತ್ತು ಕಾಳಮ್ಮ ಅಣ್ಣೇಗೌಡರ ಸ್ಮರಣಾರ್ಥವಾಗಿ ಕುಟುಂಬದ ಸದಸ್ಯರು ಎಲ್‌ಇಡಿ ಸ್ಟೇಟ್, ಇತರ ಅಗತ್ಯ ಪರಿಕರಗಳನ್ನು ಕೊಡುಗೆಯಾಗಿ ನೀಡಿ ಮಾದರಿಯಾಗಿದ್ದಾರೆ.
ಶಾಸಕ ಎ.ಮಂಜು ಅವರ ಪತ್ನಿ ತಾರಾ ಮಂಜು ಅವರ ಸಹಭಾಗಿತ್ವದಲ್ಲಿ ಕಳೆದ 2 ವರ್ಷಗಳಿಂದಲೂ ಸರ್ಕಾರಿ ಶಾಲಾ ಆವರಣದಲ್ಲಿ ಎಲ್‌ಕೆಜಿ, ಯುಕೆಜಿ ಶಿಕ್ಷಣ ನೀಡುತ್ತಿರುವ ಮಕ್ಕಳ ಮನೆ ಶಾಲೆಗಳಿಗೂ ಹಿರಿಯ ವಿದ್ಯಾರ್ಥಿಗಳು, ದಾನಿಗಳು ಸ್ಥಳೀಯವಾಗಿ ನೆರವು ನೀಡುತ್ತಿರುವುದು ತಾಲೂಕಿನ ಸರ್ಕಾರಿ ಶಾಲೆಗಳ ಉಳಿವಿಗೆ ಉತ್ತೇಜನ ಸಿಕ್ಕಿದಂತೆ ಆಗಿದೆ. ಈ ಪ್ರಯತ್ನದ ಫಲವಾಗಿ ಪ್ರಸ್ತುತ ಮಕ್ಕಳ ಮನೆ ಶಾಲೆಯಲ್ಲಿ 250ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣವನ್ನು ಪೂರ್ವ ಪ್ರಾಥಮಿಕ ಹಂತದಲ್ಲಿ ಪಡೆಯುವಂತಾಗಿದೆ. ಈ ಹಂತದ ಶಿಕ್ಷಣ ಖಾಸಗಿ ಶಾಲೆಗಳಲ್ಲಿ ಪಡೆಯಬೇಕಾದರೆ ವಾರ್ಷಿಕ 50 ಸಾವಿರ ರೂ. ಕ್ಕೂ ಅಧಿಕ ಹಣ ತೆರಬೇಕಿದೆ. ಶಾಸಕ ಮಂಜು, ಅವರ ಪತ್ನಿ ತಾರಾ ಮಂಜು ಬಡಮಕ್ಕಳಿಗೆ ಅತಿ ಕಡಿಮೆ ವೆಚ್ಚದಲ್ಲಿ ಶಿಕ್ಷಣ ಕಲ್ಪಿಸುತ್ತಿರುವುದು ತುಂಬ ಸಂತಸ ತಂದಿದೆ ಎಂದು ಹೊನ್ನೇನಹಳ್ಳಿ ಅಂಗನವಾಡಿ ಕೇಂದ್ರದ ಮಕ್ಕಳ ಪಾಲಕರಾದ ಸಾವಿತ್ರಿ, ರತ್ನ ಮೆಚ್ಚುಗೆ ವ್ಯಕ್ತಪಡಿಸಿದರು.
ಉಳ್ಳವರೆಲ್ಲ ದಾನ ಮಾಡುವುದು ಅಪರೂಪ, ಆದರೆ ಊರಿನ ದಾನಿಗಳು ಶಾಲೆಯಲ್ಲಿ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿರುವುದು ಶ್ಲಾಘನೀಯ ಸಂಗತಿ ಎಂದು ಮಕ್ಕಳ ಮನೆ ಶಾಲೆಯ ಚಿಂತಕ ಡಾ.ಅಶೋಕ್ ಹನ್ಯಾಳು ಪ್ರಶಂಸೆ ವ್ಯಕ್ತಪಡಿಸಿದರು.