ನಾಪೋಕ್ಲು: ಅಂತಾರಾಷ್ಟ್ರೀಯ ಹಾಕಿಪಟು, ಬೆಂಗಳೂರಿನ ಖೇಲೋ ಇಂಡಿಯಾದ ಪರ್ಫಾರ್ಮೆನ್ಸ್ ನಿರ್ದೇಶಕರಾಗಿರುವ ಡಾ. ಅಂಜಪರವಂಡ ಸುಬ್ಬಯ್ಯ ಹಾಕಿ ಕ್ರೀಡೆ ಅಭಿವೃದ್ಧಿಗೆ ಉತ್ತೇಜನ ನೀಡುವ ಸಲುವಾಗಿ ಮೂರ್ನಾಡು ವಿದ್ಯಾಸಂಸ್ಥೆಗೆ 50 ಸಾವಿರ ರೂ. ಮೌಲ್ಯದ ಕ್ರೀಡಾ ಸಾಮಗ್ರಿಗಳನ್ನು ಕೊಡುಗೆಯನ್ನಾಗಿ ಇತ್ತೀಚೆಗೆ ನೀಡಿದರು.
ಡಾ.ಅಂಜಪರವಂಡ ಸುಬ್ಬಯ್ಯ ಮಾತನಾಡಿ, ಹಾಕಿ ಕ್ರೀಡೆಗೆ ಮೂರ್ನಾಡು ವಿದ್ಯಾ ಸಂಸ್ಥೆಯ ಕೊಡುಗೆ ಅಪಾರವಾಗಿದ್ದು ಕ್ರೀಡೆಯನ್ನು ಉತ್ತೇಜಿಸಲು ಮೂರ್ನಾಡು ವಿದ್ಯಾಸಂಸ್ಥೆಗೆ ಮುಂದಿನ ದಿನಗಳಲ್ಲಿ ನನ್ನಿಂದಾಗುವ ಕೊಡುಗೆಯನ್ನು ನೀಡುವ ಭರವಸೆ ನೀಡಿದರು.
ವಿದ್ಯಾ ಸಂಸ್ಥೆಯ ಅಧ್ಯಕ್ಷ ಡಾ.ಚೌರಿರ ಜಗತ್ ತಿಮ್ಮಯ್ಯ ಈ ಕೊಡುಗೆಯನ್ನು ಸ್ವೀಕರಿಸಿ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಯಶಸ್ಸನ್ನು ಸಾಧಿಸಿ ಉತ್ತಮ ಕ್ರೀಡಾಪಟುಗಳಾಗಿ ಹೊರಹೊಮ್ಮಬೇಕು. ದಾನಿಗಳು ನೀಡಿದ ಕೊಡುಗೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.
ಮೂರ್ನಾಡು ವಿದ್ಯಾ ಸಂಸ್ಥೆಯ ಗೌರವ ಕಾರ್ಯದರ್ಶಿ ಪೆಮ್ಮಡಿಯಂಡ ವೇಣು ಅಪ್ಪಣ್ಣ, ವಿದ್ಯಾಸಂಸ್ಥೆಯ ನಿರ್ದೇಶಕರಾದ ಕೆರೆಮನೆ ರಾಮಮೂರ್ತಿ, ಮುಡಂಡ ಚಂಗಪ್ಪ, ವಿದ್ಯಾಸಂಸ್ಥೆಯ ಎಲ್ಲ ವಿಭಾಗದ ಮುಖ್ಯಸ್ಥರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.