ಮದ್ದೂರು ತಾಲೂಕಿನ ಆತಗೂರು ಹೋಬಳಿಯ ಮಲ್ಲನಕುಪ್ಪೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ(ಆಂಗ್ಲ ಮಾಧ್ಯಮ) ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಮಾಜ ಸೇವಕ ಸಿ.ಟಿ.ಶಂಕರ್ ಅವರು ದಾನವಾಗಿ ನೀಡಿರುವ ವಾಹನವನ್ನು ಶಾಲೆಯ ಆಡಳಿತ ಮಂಡಳಿಗೆ ಶಾಸಕ ಕೆ.ಎಂ.ಉದಯ್ ಹಸ್ತಾಂತರಿಸಿದರು. ಸಿ.ಟಿ.ಶಂಕರ್, ಸಿ.ಎಚ್.ಕಾಳೀರಯ್ಯ, ದೇವರಾಜು, ಎಂ.ಬಿ.ಕುಮಾರ್, ರವಿ, ಸಿದ್ದರಾಜು ಇದ್ದರು.  
ಜಿಲ್ಲೆ

ಸರ್ಕಾರಿ ಶಾಲೆಗೆ ಶಾಲಾ ವಾಹನ ಕೊಡುಗೆ

ಮದ್ದೂರು: ತಿಮ್ಮದಾಸ್ ಟ್ರಾವೆಲ್ಸ್ ಮಾಲೀಕ, ಸಮಾಜ ಸೇವಕ ಸಿ.ಟಿ.ಶಂಕರ್ ಅವರು ಸರ್ಕಾರಿ ಶಾಲಾ ಮಕ್ಕಳ ಅನುಕೂಲಕ್ಕಾಗಿ ವಾಹನವನ್ನು ದಾನ ನೀಡಿರುವುದು ಖುಷಿಯ ವಿಚಾರ ಎಂದು ಶಾಸಕ ಕೆ.ಎಂ.ಉದಯ್ ಮೆಚ್ಚುಗೆ ವ್ಯಕ್ತಪಡಿಸಿದರು.


ತಾಲೂಕಿನ ಆತಗೂರು ಹೋಬಳಿಯ ಮಲ್ಲನಕುಪ್ಪೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ(ಆಂಗ್ಲ ಮಾಧ್ಯಮ) ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಿ.ಟಿ.ಶಂಕರ್ ಅವರು ದಾನವಾಗಿ ನೀಡಿರುವ ವಾಹನವನ್ನು ಶಾಲೆಯ ಆಡಳಿತ ಮಂಡಳಿಗೆ ಸೋಮವಾರ ಹಸ್ತಾಂತರಿಸಿ ಮಾತನಾಡಿದರು.
ಮಲ್ಲನಕುಪ್ಪೆ ಗ್ರಾಮ ಪಂಚಾಯಿತಿ ದೊಡ್ಡ ಪಂಚಾಯಿತಿಯಾಗಿದ್ದು, ಇಲ್ಲಿನ ಸರ್ಕಾರಿ ಶಾಲೆಗೆ ಮಲ್ಲನಕುಪ್ಪೆ, ಹನುಮಂತಪುರ, ಯರಗನಹಳ್ಳಿ, ತೊರೆಶೆಟ್ಟಿಹಳ್ಳಿ, ಅಡಗನಹಳ್ಳಿ, ಬ್ಯಾಲದಕೆರೆ, ದೊಡ್ಡ ಅಂಕನಹಳ್ಳಿ, ಅಂಕನಾಥಪುರ ಹಾಗೂ ಚನ್ನಪಟ್ಟಣ ತಾಲೂಕಿನ ತಿಮ್ಮಸಂದ್ರ, ಕದಿರುಮಂಗಲ ಸೇರಿದಂತೆ ಹಲವಾರು ಗ್ರಾಮಗಳಿಂದ ಹೆಚ್ಚಿನ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಇಲ್ಲಿಯಾ ವಿದ್ಯಾರ್ಥಿಗಳಿಗೆ ಶಾಲೆಗೆ ಬರಲು ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಸಿ.ಟಿ.ಶಂಕರ್ ಅವರು ಸ್ವಂತ ಹಣದಲ್ಲಿ ವಾಹನ ನೀಡಿರುವುದು ಪ್ರಶಂಸನೀಯ ಎಂದರು.
ಎಲ್‌ಕೆಜಿ ಹಾಗೂ ಯುಕೆಜಿಯಲ್ಲಿ 50 ವಿದ್ಯಾರ್ಥಿಗಳು, 1 ರಿಂದ 7 ನೇ ತರಗತಿಯವರೆಗೆ ಸುಮಾರು 210ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಂಸಗ ಮಾಡುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳ ಹಾಜರಾತಿ ಕಂಡು ಬರುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಶಾಲೆಯ ಸಮಗ್ರ ಅಭಿವೃದ್ಧಿಗೆ ಹಂತ ಹಂತವಾಗಿ ಕ್ರಮವಹಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮೂಲ ಸೌಕರ್ಯದೊಂದಿಗೆ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲಾಗುವುದು ಎಂದರು.


ತಿಮ್ಮದಾಸ್ ಟ್ರಾವೆಲ್ಸ್ ಮಾಲೀಕ ಹಾಗೂ ಸಮಾಜ ಸೇವಕ ಸಿ.ಟಿ.ಶಂಕರ್ ಮಾತನಾಡಿ, ಮಕ್ಕಳಿಗೆ ವಿದ್ಯಾಭ್ಯಾಸ ಹಾಗೂ ಆರೋಗ್ಯ ಮುಖ್ಯವಾಗಿದ್ದು, ಇವೆರಡು ಇದ್ದರೆ ಎಲ್ಲಿ ಬೇಕಾದರೂ ಹೋಗಿ ಒಳ್ಳೆಯ ಬದುಕು ಕಟ್ಟಿಕೊಳ್ಳಬಹುದು ಎಂದರು.
ಶಾಲೆಯ ವಿದ್ಯಾರ್ಥಿಗಳು ವಿವಿಧ ಗ್ರಾಮಗಳಿಂದ ಶಾಲೆಗೆ ಬರಲು ತೊಂದರೆಯಾಗುತ್ತಿದೆ ಎಂದು ಎಸ್‌ಡಿಎಂಸಿ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರು ನನ್ನ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ವಾಹನ ಖರೀದಿಸಿ ನೀಡಲಾಗಿದೆ. ಮುಂದೆಯೂ ಈ ಶಾಲೆಗೆ ಸಹಾಯ ಮಾಡುತ್ತೇನೆ ಎಂದು ತಿಳಿಸಿದರು.
ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ಹಲವಾರು ವ್ಯಕ್ತಿಗಳು ರಾಷ್ಟ್ರ ಹಾಗೂ ಅಂತಾರಾಷ್ಟ್ರಿಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಪಾಲಕರು ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಒಳಾಗದೆ ಸರ್ಕಾರಿ ಶಾಲೆಗಳಿಗೆ ಸೇರಿಸುವ ಮೂಲಕ ಸರ್ಕಾರಿ ಶಾಲೆಗಳ ಉಳಿವಿಗೆ ಮುಂದಾಗಬೇಕು ಎಂದರು.

ಬಿಇಒ ಸಿ.ಎಚ್.ಕಾಳೀರಯ್ಯ, ಸರ್ಕಾರಿ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ದೇವರಾಜು, ಎಸ್‌ಡಿಎಂಸಿ ಅಧ್ಯಕ್ಷ ಎಂ.ಬಿ.ಕುಮಾರ್, ಉಪಾಧ್ಯಕ್ಷ ಸಿದ್ದರಾಜು, ಗ್ರಾಪಂ ಉಪಾಧ್ಯಕ್ಷ ರವಿ, ಮುಖ್ಯ ಶಿಕ್ಷಕ ನಾಗರಾಜು, ಅಕ್ಷರ ದಾಸೋಹ ಅಧಿಕಾರಿ ಮಂಗಳಮ್ಮ, ಮುಖಂಡರಾದ ಲೋಕೇಶ್, ರಾಜೇಶ್, ಮಧು, ರಾಮಲಿಂಗಯ್ಯ ಇದ್ದರು.