ಜಿಲ್ಲೆ

ರಕ್ತದಾನ, ಸಂಗ್ರಹಣಕ್ಕೆ ಸಂಚಾರಿ ವಾಹನ ಲೋಕಾರ್ಪಣೆ

ಮೈಸೂರು: ಲಯನ್ಸ್ ಬ್ಲಡ್ ಸೆಂಟರ್ ಜೀವಧಾರ ರಕ್ತ ನಿಧಿ ಕೇಂದ್ರದಿಂದ ರಕ್ತದಾನಿಗಳ ಅನುಕೂಲಕ್ಕಾಗಿ ಬಿಡಲಾದ ಸಂಚಾರಿ ರಕ್ತದಾನ ಹಾಗೂ ಸಂಗ್ರಹಣ ವಾಹನವನ್ನು ಶಾಸಕ ಕೆ. ಹರೀಶ್‌ಗೌಡ ಲೋಕಾರ್ಪಣೆಗೊಳಿಸಿದರು.

ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಸೋಮವಾರ ವಾಹನಕ್ಕೆ ಚಾಲನೆ ನೀಡಿ ಮಾತನಾಡಿ, ರಕ್ತದಾನ ಮಾಡಿದರೆ ನಿಶಕ್ತರಾಗುತ್ತಾರೆ, ರಕ್ತ ಬರುವುದೇ ಇಲ್ಲ, ರಕ್ತ ತೆಗೆದುಕೊಳ್ಳುವ ಸಂದರ್ಭದಲ್ಲಿ ಸೂಜಿ ಚುಚ್ಚುತ್ತಾರೆ, ರಕ್ತದಾನ ಮಾಡುವುದಕ್ಕೆ ಒಂದು ದಿನ ಸಂಪೂರ್ಣ ಸಮಯ ಬೇಕು ಎಂಬುದು ಸೇರಿದಂತೆ ನಾನಾ ತಪ್ಪುಕಲ್ಪನೆಗಳಿಂದ ರಕ್ತ ಮಾಡಲು ಹೆಚ್ಚು ಜನ ಮುಂದೆ ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇಂತಹ ತಪ್ಪು ಕಲ್ಪನೆಗಳನ್ನು ಹೊಗಲಾಡಿಸಿದರೆ ಶೇ.100ರಷ್ಟು ರಕ್ತ ಪೂರೈಕೆ ಮಾಡಲು ಸಾಧ್ಯ. ಹೆಚ್ಚು ಜನ ರಕ್ತದಾನ ಮಾಡುವಂತೆ ಅದರಲ್ಲೂ ವಿಶೇಷವಾಗಿ ಯುವಕರು ರಕ್ತದಾನ ಮಾಡುವಂತೆ ಪ್ರೋತ್ಸಾಹಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ಸಂಚಾರಿ ರಕ್ತದಾನ ಹಾಗೂ ಸಂಗ್ರಹಣ ವಾಹನ ಮೈಸೂರಿಗರಿಗೆ ಅವಶ್ಯಕತೆ ಇದ್ದು, ಸಾರ್ವಜನಿಕರು ರಕ್ತದಾನ ಮಾಡುವ ಮೂಲಕ ಸಹಕಾರ ನೀಡುವಂತೆ ಮನವಿ ಮಾಡಿದರು.

ಜೀವಧಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಮಾತನಾಡಿ, ಸಾರ್ವಜನಿಕರ ಅನುಕೂಲಕ್ಕಾಗಿ ರಕ್ತ ಸಂಗ್ರಹ ವಾಹನವನ್ನು ಲೋಕಾರ್ಪಣೆಗೊಳಿಸಿದ್ದೇವೆ. ಯಾರಾದರೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಲು ಬಯಸುವವರು ಮೊಬೈಲ್ ಸಂಖ್ಯೆ 9844613407 ಅನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಜಿಲ್ಲಾ ಏಡ್ಸ್ ಪ್ರಬಂಧಕ ಮತ್ತು ನಿಯಂತ್ರಣ ಘಟಕ ಅಧಿಕಾರಿ ಡಾ. ಜಯಂತ್, ಮುಖಂಡ ಮುತ್ತಣ್ಣ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಾಕೇಶ್‌ಗೌಡ, ಬಿಜೆಪಿ ನಗರ ಉಪಾಧ್ಯಕ್ಷ ಜೋಗಿ ಮಂಜು, ನಗರಪಾಲಿಕೆ ಮಾಜಿ ಸದಸ್ಯ ಕೆ.ಜೆ.ರಮೇಶ್, ಶ್ರೀದುರ್ಗಾ ಫೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್, ಅಂಬಾಭವಾನಿ ಮಹಿಳಾ ಸಂಘದ ಅಧ್ಯಕ್ಷೆ ಸವಿತಾ ಘಾಟ್ಕೆ, ಮುಖಂಡರಾದ ಮುತ್ತಣ್ಣ, ದೇವೇಂದರ್ ಪರಿಹಾರ, ನವೀನ್, ಸಚಿನ್ ನಾಯಕ್, ಮಹಾನ್ ಶ್ರೇಯಸ್, ಸದಾಶಿವ, ಸೂರಜ್, ರಕ್ತ ನಿಧಿ ಕೇಂದ್ರದ ಸಿಬ್ಬಂದಿ ಇದ್ದರು.