ಮೈಸೂರು: ಸಮರ್ಥನಂ ಅಂಗವಿಕಲ ಸಂಸ್ಥೆಯು ಲವ್ಸ್ ಕಂಪನಿಯ ಸಹಕಾರದೊಂದಿಗೆ ನಗರದ ಬನ್ನಿಮಂಟಪದಲ್ಲಿರುವ ಸಾಯಿರಂಗ ವಿದ್ಯಾಸಂಸ್ಥೆಯ ಕಿವುಡು ಗಂಡು ಮಕ್ಕಳ ಉಚಿತ ವಸತಿ ಶಾಲೆಗೆ ಮಿನಿ ವಿಜ್ಞಾನ ಪ್ರಯೋಗಾಲಯವನ್ನು ಕೊಡುಗೆಯಾಗಿ ನೀಡಲಾಯಿತು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶಂಕರಗೌಡ ಪಾಟೀಲ್, ಸಮರ್ಥನಂ ಸಂಸ್ಥೆಯ ಗುರುರಾಘವೇಂದ್ರ, ಸಾಯಿರಂಗ ವಿದ್ಯಾಸಂಸ್ಥೆಯ ದಯಾನಂದ, ಸಮರ್ಥನಂ ಸಂಸ್ಥೆಯ ಶಿವರಾಜ್ ಸಾಮೂಹಿಕವಾಗಿ ಹಸಿರು ಟೇಪ್ ಕತ್ತರಿಸುವ ಮೂಲಕ ಮಿನಿ ಪ್ರಯೋಗಾಲಯಕ್ಕೆ ಚಾಲನೆ ನೀಡಿದರು.
ಶಂಕರಗೌಡ ಪಾಟೀಲ್ ಮಾತನಾಡಿ, ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ ವಿಷಯಗಳು (ಎಸ್‌ಟಿಇಎಂ) ತಾಂತ್ರಿಕ ಕ್ರಾಂತಿಯ ಹೃದಯಭಾಗದಲ್ಲಿವೆ. ನಾವು ಬದುಕುವ ರೀತಿ ಮತ್ತು ನಾವು ಕೆಲಸ ಮಾಡುವ ವಿಧಾನವನ್ನು ಪರಿವರ್ತಿಸುತ್ತದೆ. ಶಿಕ್ಷಣ ವಲಯದಲ್ಲಿ ಎಸ್‌ಟಿಇಎಂ ಶಿಕ್ಷಣವನ್ನು ಸಂಯೋಜಿಸುವುದು ಕುತೂಹಲ, ಜಿಜ್ಞಾಸೆ, ವಿಮರ್ಶಾತ್ಮಕ-ಚಿಂತನೆ, ಸಮಸ್ಯೆ-ಪರಿಹರಿಸುವ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುತ್ತದೆ ಎಂದರು.
ವಿಜ್ಞಾನ ಸಾಕ್ಷರತೆಯು ಸ್ಟೆಮ್ (ಎಸ್‌ಟಿಇಎಂ) ಪ್ರದೇಶಗಳಲ್ಲಿ ಘನ ಜ್ಞಾನದ ಆಧಾರದ ಮೇಲೆ ಅವಲಂಬಿತವಾಗಿದೆ. ಭವಿಷ್ಯದ ಹೆಚ್ಚಿನ ಉದ್ಯೋಗಗಳಿಗೆ ಗಣಿತ ಮತ್ತು ವಿಜ್ಞಾನ ವಿಷಯಗಳ ತಿಳಿವಳಿಕೆ ಅಗತ್ಯವಿರುತ್ತದೆ ಎಂಬುದು ಸ್ಪಷ್ಟವಾಗಿದೆ ಎಂದರು.
ಸಮರ್ಥನಂ ಅಂಗವಿಕಲ ಸಂಸ್ಥೆಯ ಶೈಕ್ಷಣಿಕ ವಿಭಾಗದ ಮುಖ್ಯಸ್ಥ ಗುರು ರಾಘವೇಂದ್ರ ಮಾತನಾಡಿ, ಸಮರ್ಥನಂ ಸಂಸ್ಥೆಯು ದೇಶಾದ್ಯಂತ 17 ರಾಜ್ಯಗಳಲ್ಲಿ 700ಕ್ಕೂ ಹೆಚ್ಚು ಶಾಲೆಗಳಲ್ಲಿ ಮಿನಿ ವಿಜ್ಞಾನ ಪ್ರಯೋಗಾಲಯ, ಸ್ಮಾರ್ಟ್ ಬೋರ್ಡ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸುತ್ತಾ ಬಂದಿದೆ. ಬಡ ಮತ್ತು ಅಂಗವಿಕಲರ ಶ್ರೇಯೋಭಿವೃದ್ಧಿಗೆ ದುಡಿಯುತ್ತಿದೆ. ಮೈಸೂರಿನಲ್ಲಿ ಮೂರು ವಿಶೇಷ ಶಾಲೆಗಳ ಜತೆಗೆ ಐದು ಶಾಲೆಗಳಿಗೆ ಮಿನಿ ವಿಜ್ಞಾನ ಪ್ರಯೋಗಾಲಯ ಮತ್ತು ಸ್ಮಾರ್ಟ್ ಬೋರ್ಡ್ ನೀಡಲಾಗಿದೆ ಎಂದರು.
ಸಾಯಿರಂಗ ಸಂಸ್ಥೆಯ ಕಾರ್ಯದರ್ಶಿ ದಯಾನಂದ ಮಾತನಾಡಿ, ಶಿಕ್ಷಣವು ಸಮಾಜದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಮೂಲವಾಗಿದೆ ಎಂದು ಗುರುತಿಸಿ ಸಮರ್ಥನಂ ಸಂಸ್ಥೆ ವಿದ್ಯಾರ್ಥಿಗಳಿಗೆ ಜ್ಞಾನ ಮತ್ತು ಕಲಿಕೆಯನ್ನು ಉತ್ತೇಜಿಸಲು ವಿವಿಧ ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ವಿದ್ಯಾರ್ಥಿಗಳ ಪ್ರಾಯೋಗಿಕ ಕೌಶಲಗಳನ್ನು ಅಬಿವೃದ್ಧಿಪಡಿಸುವುದು ಅದರ ಸೈದ್ಧಾಂತಿಕ ತಿಳಿವಳಿಕೆಗೆ ಸಹಾಯ ಮಾಡುತ್ತಿರುವ ಸಮರ್ಥನಂ ಸಂಸ್ಥೆಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಸಮರ್ಥನಂ ಸಂಸ್ಥೆಯ ಮೈಸೂರಿ ವಿಭಾಗದ ಸಂಯೋಜಕ ಶಿವರಾಜು, ಸಾಯಿರಂಗ ಶಾಲೆಯ ಮುಖ್ಯಶಿಕ್ಷಕ ರಘುನಾಥ ಗೌಡ, ಸಾಯಿರಂಗ ಸಂಸ್ಥೆಯ ಖಜಾಂಚಿ ಶ್ರೀನಿವಾಸ್ ಇತರರಿದ್ದರು.