ಜಿಲ್ಲೆ

ಮ್ಯಾರಥಾನ್ ಯೋಗ ಬೋಧನೆಯ ದೇಣಿಗೆ ಶಾಲಾಭಿವೃದ್ಧಿಗೆ ಹಸ್ತಾಂತರ

ಮಂಗಳೂರು: ದೇರಳಕಟ್ಟೆ ಯೇನೆಪೋಯ ಮೆಡಿಕಲ್ ಕಾಲೇಜಿನ ರಜತ ಮಹೋತ್ಸವದ ಸಂದರ್ಭದಲ್ಲಿ ಯೋಗ ಗುರು ಕುಶಾಲಪ್ಪ ಗೌಡ ಅವರಿಂದ ನಿರಂತರ 25 ಗಂಟೆಗಳ ಮ್ಯಾರಥಾನ್ ಯೋಗ ಬೋಧನೆಯ ಸಂದರ್ಭ ಉಚಿತ ಯೋಗ ತರಬೇತಿ ಪಡೆದ ಆಸಕ್ತ ಶಿಬಿರಾರ್ಥಿಗಳಿಂದ ಹಾಗೂ ದಾನಿಗಳಿಂದ ಸಂಗ್ರಹವಾದ ಒಟ್ಟು 2,52,525 ರೂ. ಬೆಳ್ತಂಗಡಿ ಮುಗೇರಡ್ಕ ಸರ್ಕಾರಿ ಶಾಲಾ ಸೇವಾ ಟ್ರಸ್ಟ್‌ಗೆ ಹಸ್ತಾಂತರಿಸಲಾಯಿತು.


ಯೇನೆಪೋಯ ವಿಶ್ವವಿದ್ಯಾಲಯದ ಕುಲಪತಿ ಡಾ.ವೈ. ಅಬ್ದುಲ್ಲ ಕುಂಞಿ ಅವರು ಯೋಗ ಗುರು ಹಾಗೂ ಮುಗೇರಡ್ಕ ಸರ್ಕಾರಿ ಶಾಲಾ ಸೇವಾ ಟ್ರಸ್ಟ್ ಮೊಗ್ರು ಇದರ ಸ್ಥಾಪಕ ಅಧ್ಯಕ್ಷ ಕುಶಾಲಪ್ಪ ಗೌಡ ನೆಕ್ಕರಾಜೆ ಇವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮುಗೇರಡ್ಕ ಸರ್ಕಾರಿ ಶಾಲಾಭಿವೃದ್ಧಿ ಸೇವಾ ಟ್ರಸ್ಟ್ ಕಾರ್ಯದರ್ಶಿ ಮನೋಹರ ಗೌಡ ಅಂತರ,ಉಪಾಧ್ಯಕ್ಷ ಆನಂದ ಬಿ, ಟ್ರಸ್ಟಿ ಬಾಲಕೃಷ್ಣ ಮುಗೇರಡ್ಕ,ಸದಸ್ಯ ಗಂಗಾಧರ ಪೂಜಾರಿ,ಯೋಗ ಶಿಕ್ಷಕ ಗಿರಿಯಪ್ಪ ಎರ್ಮಳ,ಮಾಸ್ಟರ್ ಮೋನಿಶ್.ಯು .ಕೆ. ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ 25 ಗಂಟೆಗಳ ಮ್ಯಾರಥಾನ್ ಯೋಗ ಬೋಧನೆಯ ಮಾಡುವುದರ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಂತಹ ವಿಶ್ವ ದಾಖಲೆ ಮಾಡಿದ ಯೋಗ ಗುರು ಕುಶಾಲಪ್ಪ ಗೌಡರು ಈ ಸಾಧನೆಯಿಂದ ತನ್ನ ಸ್ವಂತಕ್ಕೆ ಯಾವುದೇ ಆರ್ಥಿಕ ಪ್ರತಿಫಲಾಪೇಕ್ಷೆ ಪಡೆಯದೇ ಸಂಗ್ರಹವಾದ ಎಲ್ಲಾ ಮೊತ್ತವನ್ನು ಗ್ರಾಮೀಣ ಮಕ್ಕಳ ಗುಣಮಟ್ಟದ ಶಿಕ್ಷಣದ ಹಿತದೃಷ್ಟಿಯಿಂದ ತನ್ನೂರಿನ ಶಾಲಾಭಿವೃದ್ಧಿ ಸಮಿತಿಗೆ ವಿನಿಯೋಗಿಸುವುದಾಗಿ ಹೇಳಿದರು.