ಹುಬ್ಬಳ್ಳಿ: ಹವ್ಯಕ ಶಿಕ್ಷಕರು ನನಗೆ ಹೆಚ್ಚು ಮತ ನೀಡುವ ಮೂಲಕ ಮೇಲ್ಮನೆಗೆ ಕಳುಹಿಸಿದ್ದಾರೆ. ಈಗ 45 ವರ್ಷ ಪೂರ್ಣಗೊಂಡಿದ್ದು, ಗಿನ್ನೆಸ್ ದಾಖಲೆಯೂ ಆಗಿದೆ. ಹವ್ಯಕ ವಿದ್ಯಾರ್ಥಿಗಳಿಗಾಗಿ ನಿರ್ಮಿಸುವ ವಸತಿ ನಿಲಯ ಕಟ್ಟಡಕ್ಕೆ 10 ಲಕ್ಷ ರೂ. ದೇಣಿಗೆ ನೀಡುವುದಾಗಿ ಸಭಾಪತಿ ಬಸವರಾಜ ಹೊರಟ್ಟಿ ಘೋಷಿಸಿದರು.
ಹವ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಹಾಗೂ ಹವ್ಯಕ ಮಹಿಳಾ ಮಂಡಳ ಹು-ಧಾ ವತಿಯಿಂದ ಇಲ್ಲಿಯ ಹವ್ಯಕ ಭವನದ ಶ್ರೀ ಶಂಕರ ಸಭಾ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಹವ್ಯಕ ಹಬ್ಬ, ಪ್ರತಿಭಾ ಪುರಸ್ಕಾರ ಹಾಗೂ ಹವ್ಯಕ ಸಂಪರ್ಕ ಸೇತು ಡೈರೆಕ್ಟರಿ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ರಾಮಕೃಷ್ಣ ಹೆಗಡೆ ಅವರಿಗೆ ನಾನು ಅಚ್ಚುಮೆಚ್ಚಿನ ಶಿಷ್ಯ. ಮನೆಯ ಮಗನಂತೆ ಅವರೊಟ್ಟಿಗೆ ಇದ್ದಿದ್ದೆ. ಅವರೇ ನನಗೆ ನಿಜವಾದ ಮಾರ್ಗದರ್ಶಕರು. ಅವರಿಂದಲೇ ನನಗೆ ರಾಜಕೀಯ ಜೀವನ ಸಿಕ್ಕಿದೆ ಎಂದು ಸ್ಮರಿಸಿದರು.
ಹವ್ಯಕ ಸಮಾಜವು ನನ್ನ ಬೆಳವಣಿಗೆಗೆ ಶಕ್ತಿಯಾಗಿ ನಿಂತಿದೆ. ಈ ಸಮುದಾಯಕ್ಕೆ ಎಲ್ಲ ರೀತಿಯ ನೆರವು ಮತ್ತು ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ. ಗಿರಿಧರ ಕಜೆ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಹವ್ಯಕರ ನಡೆ-ನುಡಿ, ಆಚರಣೆ ವಿಶಿಷ್ಟ. ಏನೇ ಮಾಡಿದರೂ ಮಹತ್ತರವಾದದನ್ನು ಮಾಡುತ್ತಾರೆ. ಪ್ರಾಚೀನ ಕನ್ನಡ ಭಾಷೆಗೆ ಹವ್ಯಕ ಭಾಷೆಯ ಹೋಲಿಕೆ ಇದೆ. ಇದು ನಮ್ಮ ಹೆಮ್ಮೆ. ನಮ್ಮ ಸಂಸ್ಕೃತಿ ಶ್ರೀಮಂತವಾದದು. ಲೋಕಕಲ್ಯಾಣಕ್ಕಾಗಿಯೇ ಈ ಸಮಾಜವಿದೆ. ನಮ್ಮದು ಮೂಲ ಕೃಷಿಯಾಗಿದ್ದರೂ ಸಂಘಟಿತರಾಗುವಲ್ಲಿ ಹಿಂದೆ ಬಿದ್ದಿದ್ದೇವೆ. ಒಗ್ಗಾಟಾಗಬೇಕು. ನಮ್ಮ ಶ್ರೇಷ್ಠ ತಳಿಯನ್ನು ಅಭಿವೃದ್ಧಿ ಮತ್ತು ಸಂರಕ್ಷಣೆ ಮಾಡಬೇಕು ಎಂದರು.
ಸೆಲ್ಕೋ ಸೋಲಾರ್ ಸಿಇಒ ಮೋಹನ ಭಾಸ್ಕರ ಹೆಗಡೆ ಮಾತನಾಡಿ, ಹವ್ಯಕರ ಜೀವ ಕಣಕಣದಲ್ಲೂ ಶಕ್ತಿ ಇದೆ. ಸಮಾಜದ ಏಳ್ಗೆಗೆ ಕಾರಣರಾದವರು ಶಂಕರಾಚಾರ್ಯರು. ಈಗಲಾದರೂ ಎಚ್ಚೆತ್ತು ನಮ್ಮ ಸಂಸ್ಕೃತಿ, ನಡೆ-ನುಡಿ, ಆಚರಣೆಗಳನ್ನು ವಿಧಿವತ್ತಾಗಿ ಪಾಲಿಸಬೇಕು. ಸಂಕೋಚ ಮತ್ತು ಸಂಕುಚಿತತೆ ಬಿಡಬೇಕು ಎಂದು ಸಲಹೆಯಿತ್ತರು.
ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವಿವಿಧ ಕ್ಷೇತ್ರದ ಸಾಧಕರಾದ ಗುತ್ತಿಗೆದಾರ ಜಿ.ಜಿ. ಭಟ್ಟ, ಭರತನಾಟ್ಯ ಕಲಾವಿದೆ ಡಾ. ಸಹನಾ ಭಟ್ಟ, ವೇ.ಮೂ. ಸೂರ್ಯನಾರಾಯಣ ಭಟ್ಟ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕೂ ಮೊದಲು ಧಾರ್ಮಿಕ ಪೂಜಾ ಕಾರ್ಯಕ್ರಮ, ವಿವಿಧ ಸ್ಪರ್ಧೆಗಳನ್ನು ಮಕ್ಕಳು ಹಾಗೂ ಮಹಿಳೆಯರಿಗಾಗಿ ಆಯೋಜಿಸಲಾಗಿತ್ತು. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಹವ್ಯಕ ಸಂಸ್ಥೆ ಅಧ್ಯಕ್ಷ ವಿ.ಎಂ. ಭಟ್ಟ ಅಧ್ಯಕ್ಷತೆ ವಹಿಸಿದ್ದರು.
ಸಂಸ್ಥೆ ಗೌರವ ಕಾರ್ಯದರ್ಶಿ ಸುದರ್ಶನ ಜಿ.ಎಚ್., ಖ್ಯಾತ ಅರ್ಥಶಾಸ್ತ್ರಜ್ಞ ಗೋಪಾಲಕೃಷ್ಣ ಕಡೆಕೋಡಿ, ಅಖಿಲ ಹವ್ಯಕ ಮಹಾಸಭಾ ಮಾಜಿ ಅಧ್ಯಕ್ಷ ಎಂ.ಕೆ. ಹೆಗಡೆ, ಕಾರ್ಯದರ್ಶಿ ವೇಣು ವ್ನಿೇಶ ಸಂಪ, ವಸಂತ ಭಟ್, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ವೀಣಾ ಹೆಗಡೆ, ಅನಿತಾ ಭಟ್, ಇತರರು ಭಾಗವಹಿಸಿದ್ದರು.