ಹರಪನಹಳ್ಳಿ: ಅಳಿವಿನಂಚಿನಲ್ಲಿರುವ ಐತಿಹಾಸಿಕ ಮಠದ ವೈಭವ ಮರುಕಳಿಸಲು ಎಲ್ಲರ ಸಹಕಾರ ಅಗತ್ಯ ಎಂದು ರಾಮಘಟ್ಟ ಪುರವರ್ಗ ಮಠದ ರಾಜಗುರು ರೇವಣಸಿದ್ದ ಶಿವಾಚಾರ್ಯ ಸ್ವಾಮೀಜಿ ಆಗ್ರಹಿಸಿದರು.
ತಾಲೂಕಿನ ಉಚ್ಚಂಗಿದುರ್ಗ ರಾಜಗುರು ರೇವಣಸಿದ್ದೇಶ್ವರ ಮಠದಲ್ಲಿ ಶನಿವಾರ ಶರನ್ನವರಾತ್ರಿ ರಾತ್ರಿ ಅಂಗವಾಗಿ ಆಯೋಜಿಸಿದ್ದ ಪ್ರವಚನ ಕಾರ್ಯಕ್ರಮದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಉಚ್ಚಂಗಿದುರ್ಗ ಕ್ಷೇತ್ರಕ್ಕೆ ಭಕ್ತರಿಂದ ಸಂಗ್ರಹವಾದ ಕಾಣಿಕೆ ಹಣವನ್ನು ಸ್ಥಳಿಯ ದೇವಸ್ಥಾನಗಳ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳಬೇಕು. ಐತಿಹಾಸಿಕ ಪರಂಪರೆಯನ್ನು ಸಾರುವ ಮಠಗಳನ್ನು ಪುನರುಜ್ಜೀವನ ಗೊಳಿಸಬೇಕು ಎಂದರು.
ಆವರಗೊಳ್ಳ ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಆಡಂಬರದ ಮಠಗಳು ಸಾಕಷ್ಟು ಸಂಖ್ಯೆಯಲ್ಲಿದ್ದು, ಅವುಗಳ ನಡುವೆ ಗುರು ತತ್ವದ ಮೂಲಕ ಜೀವನ ಶ್ರೇಷ್ಠತೆ ಸಾರುತ್ತಿರುವ ಐತಿಹಾಸಿಕ ಮಠ ಮಾದರಿಯಾಗಿದೆ. ಭಕ್ತರ ಜಂಜಾಟ ಹೋಗಲಾಡಿಸಿ ಒತ್ತಡದ ಬದುಕು ನಿವಾರಣೆಗೆ ನ್ಯಾಯಸಮ್ಮತ ಬದುಕು ನಡೆಸಲು ಮಠಗಳ ಪಾತ್ರ ಸಾಕಷ್ಟಿದೆ ಎಂದರು.