ಜಿಲ್ಲೆ

ದಾನ ಮಾಡುವದನ್ನು ಜೀವನದ ಅಂಶವಾಗಿ ಅಳವಡಿಸಿಕೊಳ್ಳಬೇಕು; ಎ.ಎಸ್.ಪೊನ್ನಣ್ಣ

ಮಡಿಕೇರಿ: ದಾನ ಮಾಡುವುದು ಮನುಷ್ಯನ ಒಂದು ಪ್ರಮುಖ ಗುಣವಾಗಿದ್ದು, ಎಲ್ಲರೂ ದಾನ ಮಾಡುವ ಗುಣವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ರಾಜ್ಯ ಉಚ್ಚ ನ್ಯಾಯಾಲಯದ ಹಿರಿಯ ವಕೀಲ ಎ.ಎಸ್.ಪೊನ್ನಣ್ಣ ಕರೆ ನೀಡಿದರು.


ಕರ್ನಾಟಕ ದಲಿತ ಸಂಘರ್ಷ ಸಮಿತಿ ಮತ್ತು ಮಡಿಕೇರಿ ಲಯನ್ಸ್ ಸಂಸ್ಥೆ ಜಂಟಿ ಆಶ್ರಯದಲ್ಲಿ ಕರ್ನಾಟಕ ರತ್ನ ಡಾ.ಪುನಿತ್ ರಾಜ್‌ಕುಮಾರ್ ಅವರ ಮೊದಲನೇ ವರ್ಷದ ಸಂಸ್ಮರಣೆ ಹಾಗೂ ಮಡಿಕೇರಿ ನಿವಾಸಿ ದಿ.ಪಂದ್ಯಂಡ ಆಶಾ ಗಣಪತಿ ಮರಣದ ನಂತರ ದೇಹದ ಅಂಗಾಂಗಗಳನ್ನು ದಾನ ನೀಡಿದರ ಪ್ರೇರೇರ್ಪಣೆಯಿಂದ ನಗರದ ಲಯನ್ಸ್ ಕ್ಲಬ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ನೇತ್ರದಾನ-ದೇಹದಾನ-ರಕ್ತದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ನೇತ್ರದಾನ-ರಕ್ತದಾನ-ಅಂಗಾಂಗ ದಾನ ಮಾಡುವಂತಹ ಪುಣ್ಯದ ಕಾರ್ಯ ಮತ್ತೊಂದಿಲ್ಲ. ಮಾಡುವ ಸಂಪಾದನೆಯಲ್ಲಿ ಒಂದಿಷ್ಟು ದಾನ ಮಾಡಬೇಕು. ದಾನ ಮಾಡುವದರಿಂದ ಉತ್ತಮ ಸಮಾಜ ಕಟ್ಟಲು ಸಾಧ್ಯವೆಂದು ಹೇಳಿದ ಅವರು, ಹಿಂದೆ ತುರ್ತು ಸಂದರ್ಭದಲ್ಲಿ ರಕ್ತ ಸಿಗುವದು ಬಹಳ ಕಷ್ಟವಿತ್ತು. ಇದೀಗ ಲಯನ್ಸ್ ಸಂಸ್ಥೆ ಬಂದ ಬಳಿಕ ಎಲ್ಲೆಡೆ ರಕ್ತ ಲಭ್ಯವಾಗುತ್ತಿದೆ ಎಂದು ಹೇಳಿದರು.


ಕರೊನಾ ಸಂದರ್ಭದಲ್ಲಿ ಸಾಕಷ್ಟು ಸಾವು-ನೋವುಗಳನ್ನು ಕಂಡಿದ್ದೇವೆ. ಇನ್ನೂ ಕೂಡ ಅಮತ್ಯವಾಗಿಲ್ಲ. ಕರೊನಾದಿಂದ ಸಂಕಷ್ಟಕ್ಕೀಡಾದವರ ಭಾಗವಾಗಿ ನಾವುಗಳು ನಿಲ್ಲಬೇಕಿದೆ. ಹಾಗಾದರೆ ಮಾತ್ರ ಉತ್ತಮ ಜೀವನ ನಡೆಸಲು ಸಾಧ್ಯ. ದೇವರು ಮನುಷ್ಯನನ್ನು ಸಮಾನತೆಯಿಂದ ಸೃಷ್ಟಿ ಮಾಡಿದ್ದಾನೆ. ಸಮಾನತೆಯನ್ನು ನಾವು ಸೃಷ್ಟಿ ಮಾಡಿಕೊಂಡಿದ್ದೇವೆ. ಪರಸ್ಪರ ಬೇಧ ಬಾವ ಮಾಡಿಕೊಂಡಿದ್ದೇವೆ. ದೇಶದ ಅಭಿವೃದ್ಧಿಗೆ ಧರ್ಮ, ಜಾತಿ, ಭ್ರಷ್ಟಾಚಾರ ದೊಡ್ಡ ಸವಾಲಾಗಿದೆ ಎಂದು ಹೇಳಿದರು.


ದಸಂಸ ಜಿಲ್ಲಾಧ್ಯಕ್ಷ ಎಚ್.ಎಲ್.ದಿವಾಕರ್ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಸಂಘಟನೆ ಮೂಲಕ ಹಲವಾರು ಹೋರಾಟ, ಸಮಾಜ ಸೇವಾ ಕಾರ್ಯಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ಇದರೊಂದಿಗೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಸಲುವಾಗಿ ಅಧಿಕ ಅಂಕಗಳಿಸುವ ವಿದ್ಯಾರ್ಥಿಗಳು ಹಾಗೂ ಶಿಕ್ಷಕರುಗಳನ್ನು ಸನ್ಮಾನಿಸಿ, ಪ್ರೋತ್ಸಾಹಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಇದರೊಂದಿಗೆ ರಕ್ತದಾನದಂತಹ ಕಾರ್ಯವನ್ನು ಕೂಡ ಮಾಡಿಕೊಂಡು ಬರಲಾಗುತ್ತಿದ್ದು, ಸಂಘಟನೆಯಲ್ಲಿಯೇ ೧೨೫ ರಕ್ತದಾನಿಗಳಿರುವದಾಗಿ ಹೇಳಿದರು.


ನೇತ್ರದಾನಕ್ಕೆ ೨೫ ಜನ ನೋಂದಣಿ: ಕಾರ್ಯಕ್ರಮದಲ್ಲಿ ೨೫ ಜನ ನೇತ್ರದಾನ ಮಾಡಲು ಮುಂದೆ ಬಂದಿದ್ದು, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ೮ ಜನ ತಮ್ಮ ದೇಹದಾನ ಮಾಡಲು ನೋಂದಾಯಿಸಿದರೆ, ೧೪ ಜನ ರಕ್ತದಾನ ಮಾಡಿದರು.


ಲಯನ್ಸ್ ಸಂಸ್ಥೆ ಅಧ್ಯಕ್ಷೆ ಕನ್ನಂಡ ಕವಿತಾ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಡಗದಾಳು ಪ್ರೌಢಶಾಲೆ ಮುಖ್ಯ ಶಿಕ್ಷಕಿ ಎಂ.ಜೆ.ಗಂಗಮ್ಮ, ಅತಿಥಿಗಳಾಗಿ ನೇತ್ರದಾನ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಕೃಪಾಲಿನಿ ಅಯ್ಯಪ್ಪ, ರಕ್ತನಿಧಿ ವಿಭಾಗದ ಅಧಿಕಾರಿ ಡಾ.ಕೆ.ಪಿ. ಕರುಂಬಯ್ಯ, ಲಯನ್ಸ್ ಕ್ಲಬ್ ಟ್ರಸ್ಟ್ ಅಧ್ಯಕ್ಷ ನವೀನ್ ಅಂಬೆಕಲ್, ಕಡಗದಾಳುವಿನ ದಾನಿ ಟಿ.ಆರ್.ವಾಸುದೇವ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಪ್ರಧಾನ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯೂ, ದಸಂಸ ಮಡಿಕೇರಿ ತಾಲೂಕು ಸಂಚಾಲಕ ಎ.ಪಿ.ದೀಪಕ್ ಉಪಸ್ಥಿತರಿದ್ದರು.