ನೇತ್ರದಾನದ ಮಾಡಿದ ಕುಟುಂಬದವರಿಗೆ ದೊಡ್ಡಬಳ್ಳಾಪುರದ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಸನ್ಮಾನ ಮಾಡಲಾಯಿತು. ಶಿಕ್ಷಣ ಸಂಸ್ಥೆಯ ಸಿಇಒ ಪ್ರಿಯಾಂಕಾ, ಡಾ.ನರೇಶ್​ ಶೆಟ್ಟಿ, ಡಾ.ಅಂಬಿಕಾ, ಡಾ.ಕಾಂತಿಮತಿ, ಅಭಿಷೇಕ ನೇತ್ರಧಾಮದ ವೈದ್ಯ ಹರೀಶ್​, ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು. 
ಜಿಲ್ಲೆ

ನೇತ್ರದಾನ ಮಾಡಿ ಅಂಧರ ಬಾಳಿಗೆ ಬೆಳಕಾಗಿ

ದೊಡ್ಡಬಳ್ಳಾಪುರ : ಪಂಚೇಂದ್ರಿಯಗಳಲ್ಲಿ ಕಣ್ಣು ಪ್ರಮುಖ. ಕಣ್ಣುದಾನದ ಮೂಲಕ ಬೇರೊಬ್ಬರಿಗೆ ದೃಷ್ಟಿ ನೀಡಿ ಅವರ ಜೀವನಕ್ಕೆ ಬೆಳಕಾಗಬಹುದು ಎಂದು ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಂ.ಬಿ ಗುರುದೇವ್​ ತಿಳಿಸಿದರು. ನಗರದ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಅಭಿಷೇಕ್​ ನೇತ್ರಧಾಮ, ಸ್ವಾಮಿ ವಿವೇಕಾನಂದ ಶಾಲೆ, ಎಂಎಬಿಎಲ್​ ಶಾಲೆಯಿಂದ ಬುಧವಾರ ಹಮ್ಮಿಕೊಂಡಿದ್ದ ನೇತ್ರದಾನಿಗಳ ಕುಟುಂಬಕ್ಕೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಣ್ಣು ಇದ್ದವರಷ್ಟೇ ಸಮಾಜದಲ್ಲಿ ನಡೆಯುವ ಟನೆಗಳನ್ನು ತಿಳಿಯಲು ಮತ್ತು ಪ್ರಕೃತಿಯ ಸೌಂದರ್ಯ ಸವಿಯಲು ಸಾಧ್ಯ. ಜನರು ಸ್ವ&ಪ್ರೇರಣೆಯಿಂದ ನೇತ್ರದಾನಕ್ಕೆ ಮುಂದಾಗುವ ಜತೆಗೆ ಇತರರನ್ನೂ ಪ್ರೇರೇಪಿಸಿದರೆ ಅಂಧತ್ವ ನಿವಾರಿಸಬಹುದು ಎಂದರು.

ಮನುಷ್ಯನ ದೇಹದ ಜತೆ ಮಣ್ಣಾಗುವ ಕಣ್ಣುಗಳನ್ನು ದಾನ ಮಾಡಬೇಕು. ದೇಹಕ್ಕೆ ಸಾವು ಬರುತ್ತದೆ. ಆದರೆ, ಕಣ್ಣಿಗೆ ಸಾವಿಲ್ಲ. ಅಂಗಾಂಗಳಲ್ಲಿಯೇ ಕಣ್ಣು ಅಮೂಲ್ಯವಾದದ್ದು. ಕಣ್ಣುಗಳ ಆರೈಕೆಯಷ್ಟೇ ರಕ್ಷಣೆಯೂ ಮುಖ್ಯ. ಪ್ರಸ್ತುತ ಮೊಬೈಲ್​ನ ಅತಿಯಾದ ಬಳಕೆಯಿಂದ ಮಕ್ಕಳು ಮತ್ತು ವಯೋವೃದ್ಧರಲ್ಲಿ ದೃಷ್ಟಿ ದೋಷ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಆದ್ದರಿಂದ ಕಣ್ಣು ದಾನ ಮಾಡುವ ಮೂಲಕ ಅಂಧರ ಬಾಳಿಗೆ ಬೆಳಕಾಗಬೇಕು ಎಂದರು. 7 ನೇತ್ರದಾನಿಗಳ ಕುಟುಂಬಗಳನ್ನು ಸನ್ಮಾನಿಸಲಾಯಿತು. ಜತೆಗೆ 10 ರಾಯಭಾರಿಗಳಿಗೂ ಸನ್ಮಾನಿಸಿ ನೇತ್ರದಾನದ ಮಹತ್ವದ ಬಗ್ಗೆ ತಿಳಿಸಿ ತಿಳಿಸಲಾಯಿತು.

ಅಂಧರ ಬಾಳಿನಲ್ಲಿ ಬೆಳಕು : ನೇತ್ರದಾನಕ್ಕೆ ಬದುಕಿದ್ದಾಗಲೇ ಹೆಸರು ನೋಂದಾಯಿಸಬೇಕು. ನೇತ್ರದಾನವು ಇತರೆ ಅಂಗಾಂಗ ದಾನದಂತೆ ಬದುಕಿದ್ದಾಗಲೇ ಕೊಡುವುದಲ್ಲ. ಬದಲಿಗೆ ಸಾವಿನ ನಂತರ ದಾನ ಮಾಡುವುದು. ವ್ಯಕ್ತಿ ಸತ್ತ ನಂತರವೂ ಅವರ ಕಣ್ಣುಗಳು ಬೇರೆಯವರ ಮೂಲಕ ಸುಂದರ ಬದುಕು ನೋಡುತ್ತವೆ. ವ್ಯಕ್ತಿಗೆ ಕಣ್ಣು ಇಲ್ಲದಿದ್ದರೆ ಜೀವನವೇ ಬರಿದಾದಂತೆ. ಪ್ರತಿನಿತ್ಯ ಸಾವಿರಾರು ಜನರು ಸಾಯುತ್ತಾರೆ. ಆದರೆ, ಕಣ್ಣಿನ ಮಹತ್ವ ತಿಳಿಯದೆ ಅವರೆಲ್ಲಾ ನೇತ್ರದಾನ ಮಾಡುತ್ತಿಲ್ಲ. ಜನರಿಗೆ ನೇತ್ರದಾನದ ಮಹತ್ವ ತಿಳಿಸಿ ಅಂಧರ ಬಾಳಿನಲ್ಲಿ ಬೆಳಕು ತರುವ ಕೆಲಸ ಮಾಡಬೇಕು ಎಂದು ವೈದ್ಯೆ ಡಾ.ಇಂದಿರಾ ಶ್ಯಾಮಪ್ರಸಾದ್​ ತಿಳಿಸಿದರು.