ಹೊಸಕೋಟೆ: ವಿಶ್ವಕರ್ಮ ಸಮುದಾಯದವರು ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ಒದಗಿಸುವಂತೆ ಮನವಿ ಮಾಡಿದ್ದಾರೆ. ನಗರದ ಹೊರವಲಯದಲ್ಲಿ ಜಮೀನು ಒದಗಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ತಾಲೂಕು ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಯಂತಿಯಲ್ಲಿ ಮಾತನಾಡಿದರು. ವಿಶ್ವ ಕರ್ಮ ಜನಾಂಗದಲ್ಲಿ ಜನಿವಾರ ಬಳಕೆ ಮಾಡುವುದರಿಂದ ಮುಂದುವರೆದ ಸಮಾಜ ಎಂಬ ಭಾವನೆ ಎಲ್ಲರಲ್ಲಿದೆ, ಆದರೆ ಆ ಸಮುದಾಯದಲ್ಲೂ ಆರ್ಥಿಕ ಸಾಮಾಜಿಕ ಹಾಗೂ ರಾಜಕೀಯವಾಗಿಯೂ ಹಿಂದುಳಿದವರಿದ್ದಾರೆ, ಮಾಜಿ ಸಂಸದ ಬಿ.ಎನ್ ಬಚ್ಚೇಗೌಡರ ಕಾಲದಿದಲೂ ವಿಶ್ವಕರ್ಮ ಜನಾಂಗದವರಿಗೆ ಬಹಳಷ್ಟು ಅವಕಾಶಗಳನ್ನು ನೀಡಿತ್ತಾ ಬಂದಿದ್ದು ಈಗಲೂ ನಾವು ವಿಶ್ವಕರ್ಮ ಜನಾಂಗಕ್ಕೆ ಅವಶ್ಯವಾದ ಎಲ್ಲ ಸಹಕಾರ ನೀಡಲಿದ್ದೇನೆ ಎಂದರು. ತಾಲೂಕು ಸಮುದಾಯದವರು ವಿಶ್ವಕರ್ಮ ಪುತ್ಥಳಿ ನಿರ್ಮಾಣಕ್ಕೆ ನಗರದ ಉದ್ಯಾನವನದಲ್ಲಿ ಅವಕಾಶ ನೀಡಲು ಮನವಿ ಮಾಡಿದ್ದಾರೆ. ಈ ಬಗ್ಗೆ ಬಗ್ಗೆ ನಗರಾಯುಕ್ತರ ಬಳಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ಎಸ್ಸೆಸ್ಸೆಲ್ಸಿ ಹಾಗೂ ದ್ವೀತಿಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.