ಜಿಲ್ಲೆ

ನೇತ್ರದಾನ ಮಾಡಿ ಅಂಧರ ಬಾಳಿಗೆ ಬೆಳಕಾಗಿ: ಜೆಎಸ್​ಎಸ್ ಶಾಲೆಯಲ್ಲಿ ನೇತ್ರದಾನ ಪಾಕ್ಷಿಕ ಅಭಿಯಾನ

ಧಾರವಾಡ: ಪ್ರತಿಯೊಬ್ಬರ ಜೀವನದಲ್ಲಿ ಕಣ್ಣಿನ ಪಾತ್ರ ಮುಖ್ಯ. ಬಾಹ್ಯವಾಗಿ ನಡೆಯುವ ಘಟನಾವಳಿಗಳ ವಿಚಾರವನ್ನು ಮಿದುಳಿಗೆ ರವಾನಿಸುವ ಅಂಗ ಕಣ್ಣು. ಕಣ್ಣಿಲ್ಲದ ವ್ಯಕ್ತಿಯ ಜೀವನ ಅರ್ಥವಿಲ್ಲದ ಜೀವನ ಎಂದೆನಿಸುತ್ತದೆ ಎಂದು ಜೆಎಸ್​ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.

ಇಲ್ಲಿನ ಮೃತ್ಯುಂಜಯ ನಗರದ ಜೆಎಸ್​ಎಸ್​ನ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜನತಾ ಶಿಕ್ಷಣ ಸಮಿತಿ ಸುವರ್ಣ ಮಹೋತ್ಸವ ಹಾಗೂ ಡಾ. ಡಿ. ವೀರೇಂದ್ರ ಹೆಗ್ಗಡೆ 75ನೇ ಜನ್ಮದಿನ ನಿಮಿತ್ತ ಜೆಎಸ್​ಎಸ್ ಹಾಗೂ ಎಂ.ಎಂ. ಜೋಶಿ ಕಣ್ಣಿನ ಆಸ್ಪತ್ರೆ ವತಿಯಿಂದ ಸೋಮವಾರ ಏರ್ಪಡಿಸಿದ್ದ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಅಭಿಯಾನ ಹಾಗೂ ನೇತ್ರದಾನ ವಾಗ್ದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನೇತ್ರದಾನ ಶ್ರೇಷ್ಠ ಕಾರ್ಯ. ಪ್ರತಿಯೊಬ್ಬ ನಾಗರಿಕ ಮರಣಾನಂತರ ಕಣ್ಣುಗಳನ್ನು ದಾನ ಮಾಡುವ ಯೋಚನೆಯನ್ನು ಜೀವಿತಾವಧಿಯಲ್ಲೇ ಹೊಂದಿದರೆ ಎಷ್ಟೋ ಅಂಧರು ಸುಂದರ ಪ್ರಪಂಚ ನೋಡಲು ಸಹಾಯವಾಗುತ್ತದೆ. ದೇಶದಲ್ಲಿ ಪ್ರತಿ ವರ್ಷ ಸುಮಾರು 30 ಲಕ್ಷ ಜನ ಸಾವನ್ನಪ್ಪುತ್ತಾರೆ. ಅದರಲ್ಲಿ ಶೇ. 1ರಷ್ಟು ಜನ ನೇತ್ರದಾನ ಮಾಡಿದರೆ ದೇಶದಲ್ಲಿನ ಅಂಧತ್ವ ನಿವಾರಣೆ ಮಾಡಬಹುದು ಎಂದರು.

ನೇತ್ರದಾನ ಹಾಗೂ ರಕ್ತದಾನದ ಬಗ್ಗೆ ಪಠ್ಯಕ್ರಮದಲ್ಲಿ ವಿಷಯ ಅಳವಡಿಸಿದರೆ ವಿದ್ಯಾರ್ಥಿ ದಿಸೆಯಿಂದಲೇ ನೇತ್ರದಾನ ಹಾಗೂ ರಕ್ತದಾನಕ್ಕೆ ಪ್ರೇರೆಪಿಸಬಹುದು. ಜೆಎಸ್​ಎಸ್​ನ ಮಕ್ಕಳು ನೇತ್ರದಾನ ಮಾಡುವದಲ್ಲದೆ ಮನೆಯವರಿಗೂ ನೇತ್ರದಾನದ ಮಹತ್ವ ತಿಳಿಸಿ ನೇತ್ರದಾನ ಮಾಡಲು ವಾಗ್ದಾನ ಮಾಡಿಸುತ್ತಿರುವುದು ಶ್ಲಾಘನೀಯ ಎಂದರು.

ಎಂ.ಎಂ ಜೋಶಿ ನೇತ್ರಾಲಯದ ನಿರ್ದೇಶಕ ಡಾ. ಕೆ.ವಿ. ಸತ್ಯಮೂರ್ತಿ ಮಾತನಾಡಿ, ನೇತ್ರದಾನ ಮಾಡಿದ ವ್ಯಕ್ತಿಯ ಮರಣಾನಂತರ ಸಂಬಂಧಿಕರು ಆರೋಗ್ಯ ಇಲಾಖೆಗೆ ತಿಳಿಸಿದರೆ, 6 ಗಂಟೆಯೊಳಗೆ ನೇತ್ರವನ್ನು ಸಂಗ್ರಹಿಸುವ ವ್ಯವಸ್ಥೆ ಮಾಡಲಾಗುತ್ತದೆ. ಸಂಗ್ರಹಿಸಿದ ಕಣ್ಣುಗಳ ಕಾರ್ನಿಯಾವನ್ನು ನಾಲ್ಕು ವಿಧಗಳಾಗಿ ವಿಂಗಡಿಸಿ ಅಂಧ ವ್ಯಕ್ತಿಗೆ ಯಾವ ಅಂಶದ ಕೊರತೆ ಇರುತ್ತದೆಯೋ ಆ ಅಂಶವನ್ನು ಅಳವಡಿಸಿ ದೃಷ್ಟಿ ನೀಡಲಾಗುವುದು. ಒಬ್ಬ ದಾನಿಯಿಂದ ನಾಲ್ಕು ಜನರು ದೃಷ್ಟಿ ಪಡೆದುಕೊಳ್ಳುತ್ತಾರೆ. ಹೀಗಾಗಿ ನೇತ್ರದಾನಕ್ಕೆ ಮುಂದಾಗಬೇಕು ಎಂದರು.

ಕಾರ್ಯಕ್ರಮದಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಪಾಲಕರು ಹಾಗೂ ಸಿಬ್ಬಂದಿ ನೇತ್ರದಾನದ ವಾಗ್ದಾನ ಮಾಡಿದರು. ಬಳಿಕ ನೇತ್ರದಾನದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಂದ ಕಿರುನಾಟಕ ಪ್ರದರ್ಶಿಸಲಾಯಿತು.

ಜೆಎಸ್​ಎಸ್ ಐಟಿಐ ಕಾಲೇಜಿನ ಪ್ರಾಚಾರ್ಯ ಮಹಾವೀರ ಉಪಾಧ್ಯೆ, ಡಾ. ಬಿ.ಎನ್. ಭಾವಿ, ಪ್ರಾಚಾರ್ಯು ತ್ರಿವೇಣಿ ಆರ್., ಇತರರು ಇದ್ದರು.