ಹುಬ್ಬಳ್ಳಿ-: ಬದುಕಿದ್ದಾಗ ಜನಪರ ಕಾಳಜಿ ವಹಿಸಿದರೆ ಸಾಲದು, ಸತ್ತ ನಂತರವೂ ನಾಲ್ಕು ಜನರಿಗೆ ಉಪಯೋಗವಾಗಬೇಕು, ಅಂಗಾಂಗ ದಾನ ಮಾಡುವ ಮೂಲಕ ಇದನ್ನು ಸಾಧಿಸಬಹುದು ಎಂದು ಸಾಹಿತಿ ಕೃಷ್ಣಮೂರ್ತಿ ಕುಲಕರ್ಣಿ ಹೇಳಿದರು.
ಇಲ್ಲಿಯ ಉಣಕಲ್ಲ ಕ್ರಾಸ್ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಕಾರ್ಯಾಲಯದಲ್ಲಿ ಮಂಗಳವಾರ ಚಿಂತನ ವೇದಿಕೆ ಏರ್ಪಡಿಸಿದ್ದ ವಿಶ್ವ ಅಂಗದಾನ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಸತ್ತ ಮೇಲೆ ದೇಹವನ್ನು ವ್ಯರ್ಥವಾಗಿ ಸುಡುವ, ಹೂಳುವ ಬದಲು ಅದನ್ನು ದಾನ ಮಾಡುವ ಮೂಲಕ ನಾವು ಬದುಕಿರುವಾಗಲೇ ಗಟ್ಟಿ ನಿರ್ಧಾರ ಕೈಗೊಂಡು ವಾಗ್ದಾನ ಮಾಡಬೇಕು ಎಂದರು.
ತಾವು ಕಿಮ್ಸ್ ಮಹಾವಿದ್ಯಾಲಯಕ್ಕೆ ದೇಹವನ್ನು ಹಾಗೂ ಡಾ. ಜೋಶಿ ನೇತ್ರಾಲಯಕ್ಕೆ ಕಣ್ಣುಗಳನ್ನು ದಾನ ಮಾಡಲು ವಾಗ್ದಾನ ಮಾಡಿರುವುದಾಗಿ ಕುಲಕರ್ಣಿ ಹೇಳಿದರು.
ದೇಹ ಹಾಗೂ ನೇತ್ರದಾನ ಮಾಡಿದ ಕೃಷ್ಣಮೂರ್ತಿ ಅವರನ್ನು ವೇದಿಕೆ ವತಿಯಿಂದ ಗೌರವಿಸಲಾಯಿತು.
ಪರಿಷತ್ ನ ಚನ್ನಬಸಪ್ಪ ಧಾರವಾಡಶೆಟ್ರು ಅಧ್ಯಕ್ಷತೆ ವಹಿಸಿದ್ದರು. ಶೇಖರಗೌಡ ಪಾಟೀಲ, ಗಂಗಯ್ಯ ಕುಲಕರ್ಣಿ ಮಾತನಾಡಿದರು, ರಮೇಶ ವಿ.ಎಸ್. ಸ್ವಾಗತಿಸಿದರು. ಗಣೇಶ ವಂದಿಸಿದರು.