ಜಿಲ್ಲೆ

ಜೀವ ಉಳಿಸಲು ರಕ್ತದಾನ ಮಾಡಿ

ಮುಂಡರಗಿ: ರಕ್ತದಾನ ಮಾಡುವುದರಿಂದ ದಾನಿ ಮತ್ತು ಇತರರಿಗೆ ಹಲವು ಪ್ರಯೋಜನಗಳಿವೆ. ದಾನಿ ತನ್ನ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು. ರಕ್ತದೊತ್ತಡವನ್ನು ನಿಯಂತ್ರಿಸಬಹುದು ಮತ್ತು ಕಬ್ಬಿಣದ ಅಂಶವನ್ನು ಕಡಿಮೆ ಮಾಡಬಹುದು. ರಕ್ತದಾನವು ಇತರರಿಗೆ ಜೀವ ಉಳಿಸಲು ಸಹಾಯಕವಾಗುತ್ತದೆ ಎಂದು ವಿಜ್ಞಾನ ಶಿಕ್ಷಕ ಆರ್.ವಿ. ಅರ್ಕಸಾಲಿ ಹೇಳಿದರು.

ಪಟ್ಟಣದ ಜೆ.ಟಿ. ಕೋಟೆ ಪ್ರೌಢಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ರಕ್ತ ದಾನಿಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಸ್ತ್ರ ಚಿಕಿತ್ಸೆ, ಗಾಯಗಳು ಮತ್ತು ಕ್ಯಾನ್ಸರ್ ಚಿಕಿತ್ಸೆಗಳಲ್ಲಿ ನಿಯಮಿತವಾಗಿ ರಕ್ತದಾನ ಮಾಡುವುದರಿಂದ ದೇಹದಲ್ಲಿ ಕಬ್ಬಿಣ ಮತ್ತು ಹಿಮೋಗ್ಲೋಬಿನ್ ಪ್ರಮಾಣ ಕಡಿಮೆಯಾಗುತ್ತದೆ. ಇದು ಆರೋಗ್ಯಕರ ಹೃದಯಕ್ಕೆ ಕಾರಣವಾಗುತ್ತದೆ ಮತ್ತು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ರಕ್ತನಾಳಗಳನ್ನು ಬಲಪಡಿಸುವ ಮೂಲಕ ರಕ್ತ ಪರಿಚಲನೆ ಸುಧಾರಿಸುತ್ತದೆ ಎಂದರು.

ಶಾಲೆಯ ಮುಖ್ಯಶಿಕ್ಷಕ ಎಂ.ಎಸ್. ತೆಗ್ಗಿನಮನಿ, ಶಿಕ್ಷಕರಾದ ಎಂ.ಟಿ. ಮಾಳಾಪೂರ, ಎನ್. ಅಡರಕಟ್ಟಿ, ಪ್ರದೀಪ ನಾಯಕ, ಬಿ.ಎಸ್. ಕುರಿ ಉಪಸ್ಥಿತರಿದ್ದರು.