ಸಿರಗುಪ್ಪದಲ್ಲಿ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿದ ಅಗ್ನಿ ಶಾಮಕ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ನಿರ್ದೇಶಕ ಎಚ್.ಜೆ.ಹನುಮಂತಯ್ಯ, ತಾಲೂಕು ವೈದ್ಯಾಧಿಕಾರಿ ದಮ್ಮೂರು ಬಸವರಾಜ, ವಿಷ್ಣು ವಿಲಾಸ ಬ್ಯಾಂಕ್ ನಿರ್ದೇಶಕ ನಾಗರಾಜ, ಮ್ಯಾನೇಜರ್ ಅನಿಲ್ ಕುಮಾರ್, ಅಗ್ನಿಶಾಮಕದಳದ ಸಿಬ್ಬಂದಿ ಮಂಜುನಾಥ, ಮಂಜುನಾಥ ಕುರಿ ಇದ್ದರು. 
ಜಿಲ್ಲೆ

ರಕ್ತದಾನ ಮಾಡಿ ಅಮೂಲ್ಯ ಜೀವ ಉಳಿಸಿ

ರುದ್ರಪ್ಪ ವಾಲಿ

ಸಿರಗುಪ್ಪ: ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ರಜತ ಮಹೋತ್ಸವ ಅಂಗವಾಗಿ ಬಳ್ಳಾರಿ ಜಿಲ್ಲಾ ಸೌಹಾರ್ದ ಸಹಕಾರ ಸಂಘಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಬೃಹತ್ ರಕ್ತದಾನ ಶಿಬಿರ ನಡೆಯಿತು. ಜಿಲ್ಲಾ ಬಿಮ್ಸ್ ಮತ್ತು ಸಿರಗುಪ್ಪ ಸ್ಪಂದನ ರಕ್ತನಿಧಿ ಕೇಂದ್ರದ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ 300 ಯೂನಿಟ್ ರಕ್ತ ಸಂಗ್ರಹಿಸಿದರು.

ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ನಿರ್ದೇಶಕ ಎಚ್.ಜೆ.ಹನುಮಂತಯ್ಯ ಮಾತನಾಡಿ, ಕೃತಕವಾಗಿ ತಯಾರಿಸಲು ಸಾಧ್ಯವಾಗದ ರಕ್ತವನ್ನು ಮತ್ತೊಬ್ಬರಿಗೆ ದಾನ ಮಾಡುವ ಮೂಲಕ ಜೀವ ಉಳಿಸುವಂಥ ಕೆಲಸ ನಿಜಕ್ಕೂ ಶ್ರೇಷ್ಠವಾಗಿದೆ ಎಂದರು.

ತಾಲೂಕು ವೈದ್ಯಾಧಿಕಾರಿ ದಮ್ಮೂರು ಬಸವರಾಜ ಮಾತನಾಡಿ, ಸಿರಗುಪ್ಪ ಸೌಹಾರ್ದ ಸಹಕಾರಿ ಹಾಗೂ ಯುವಕರು ನಿರಂತರವಾಗಿ ಇನ್ನೊಬ್ಬರಿಗೆ ಪ್ರೇರಣೆಯಾಗುವ ಸಾಮಾಜಿಕ ಕಾರ್ಯವಾದ ರಕ್ತದಾನ ಶಿಬಿರ ಮಾಡಿರುವುದು ಹೆಮ್ಮೆ ವಿಷಯ ಎಂದರು.