ವಿಜಯಪುರ:ಜಗತ್ತಿನಲ್ಲಿ ಪ್ರತಿಯೊಂದಕ್ಕೂ ಪರ್ಯಾಯ ವಸ್ತು ಸಿಗುತ್ತದೆ. ಆದರೆ ರಕ್ತಕ್ಕೆ ರಕ್ತವೇ ಗತಿ. ರಕ್ತಕ್ಕೆ ಪರ್ಯಾಯ ವಸ್ತು ಇಲ್ಲ. ಹೀಗಾಗಿ ಅಮೂಲ್ಯ ರಕ್ತವನ್ನು ದಾನ ಮಾಡುವುದರ ಮೂಲಕ ಇತರರ ಜೀವ ಉಳಿಸುವ ಪುಣ್ಯದ ಕೆಲಸ ನಾವೆಲ್ಲರೂ ಮಾಡಬೇಕು ಎಂದು ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಜಿಲ್ಲಾ ಶಾಖೆಯ ಚೇರ್ಮನ್ ಶರತ್ ರೊಡಗಿ ಹೇಳಿದರು.
ನಗರದ ಎ.ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಯೂಥ್ ರೆಡ್ ಕ್ರಾಸ್ ಸಂಸ್ಥೆ, ಎನ್ಎಸ್ಎಸ್, ಎನ್ಸಿಸಿ ಹಾಗೂ ಐಕ್ಯೂಎಸಿ ಹಾಗೂ ಭಾರತಿಯ ರೆಡ್ ಕ್ರಾಸ್ ಸೊಸೈಟಿಗಳ ಸಹಯೋಗದಲ್ಲಿ ಇತ್ತೀಚೆಗೆ ಹಮ್ಮಿಕೊಂಡ "ವಿಶ್ವ ಪ್ರಥಮೋಪಚಾರ ದಿನಾಚರಣೆ'ಯಲ್ಲಿ ಮಾತನಾಡಿದ ಅವರು, ಒಬ್ಬ ವ್ಯಕ್ತಿ ಅಪಾಯದಲ್ಲಿದ್ದಾಗ ಅಥವಾ ನೋವಿನಿಂದ ಬಳಲುತ್ತಿದ್ದಾಗ ಜೀವ ಹಾನಿ ತಪ್ಪಿಸಲು ಪ್ರಥಮೋಪಚಾರ ಅವಶ್ಯ. ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ಪ್ರಥಮೋಪಚಾರದ ಅವಶ್ಯಕತೆ ಮತ್ತು ಪ್ರಯೊಜನಗಳ ಕುರಿತು ತಿಳಿಯಬೇಕಾದ ಅವಶ್ಯಕತೆ ಇದೆ ಎಂದರು.
ರೆಡ್ ಕ್ರಾಸ್ ಸೊಸೈಟಿ ರಕ್ತ ಬಂಢಾರದ ವೈದ್ಯಾಧಿಕಾರಿ ಡಾ. ಎಸ್.ಎಸ್. ಪತ್ತೇಪುರ ಪ್ರಥಮೋಪಚಾರದ ಹಿನ್ನೆಲೆ, ಅದರ ಅವಶ್ಯಕತೆ, ಹಾಗೂ ಅದರ ಅವಶ್ಯಜ್ಞಾನದ ಕುರಿತು ಮಾತನಾಡಿದರು.ವೈದ್ಯಾಧಿಕಾರಿ ಡಾ. ಸುನೀಲ ಉಪನ್ಯಾಸ ನೀಡಿ, ಇಂದಿನ ಜನರಿಗೆ ಪ್ರಥಮೋಪಚಾರದ ಕುರಿತು ಅರಿವು ಹೊಂದಬೇಕು. ಅದರಲ್ಲಿಯೂ ಯುವಕರಲ್ಲಿ ಇದರ ಜ್ಞಾನ ಅವಶ್ಯವಾಗಿರಬೇಕು ಎಮದು ಸಲಹೆ ನೀಡಿದರು.
ಪ್ರಾಚಾರ್ಯ ಡಾ. ಎಸ್.ಬಿ. ಕಮತಿ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಚರ್ಯ ಎಸ್.ಎ. ಪಾಟೀಲ, ಎಸ್.ಜಿ. ಮುರನಾಳ ವೇದಿಕೆಯಲ್ಲಿದ್ದರು.
ರವಿ ಮನಗೂಳಿ, ವಿಜಯಮಹಾಂತೇಶ ಬಳಗಾನೂರ ಮತ್ತಿತರರಿದ್ದರು. ಡಾ. ರವೀಂದ್ರಗೌಡ ಸ್ವಾಗತಿಸಿ, ಪರಿಚಯಿಸಿದರು. ಸುಭಾಸ ಕನ್ನೂರ ನಿರೂಪಿಸಿದರು. ಸೋಮನಗೌಡ ಪಾಟೀಲ ವಂದಿಸಿದರು.
ವಿಜಯಪುರದ ಎ.ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದಲ್ಲಿ "ವಿಶ್ವ ಪ್ರಥಮೋಪಚಾರ ದಿನ' ಆಚರಿಸಲಾಯಿತು. ಶರತ್ ರೊಡಗಿ, ಡಾ. ಎಸ್.ಎಸ್. ಪತ್ತೇಪುರ, ಡಾ. ಎಸ್.ಬಿ. ಕಮತಿ ಮತ್ತಿತರರಿದ್ದಾರೆ.