ಜಿಲ್ಲೆ

ರಕ್ತದಾನ ಮಾಡಿ ಜೀವ ಉಳಿಸಿ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ರಕ್ತದಾನ ಮಾಡುವುದು ಜೀವದಾನ ಮಾಡಿದಂತೆ. ಒಂದು ಜೀವವನ್ನು ಉಳಿಸುವುದು ಸಮಾಜವನ್ನು ಆರೋಗ್ಯವಾಗಿಡುವಲ್ಲಿ ರಕ್ತದಾನ ಪ್ರಾಮುಖ್ಯತೆ ವಹಿಸುತ್ತದೆ. ರಕ್ತದಾನ ಮಾಡುವುದು ಒಂದು ಪುಣ್ಯದ ಕೆಲಸ ಎಂದು ಜೆಎಸ್​ಎಸ್​ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.

ನಗರದ ಜೆಎಸ್​ಎಸ್​ನ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ, ಜೆಎಸ್​ಎಸ್​ ಬನಶಂಕರಿ ಪದವಿ ಕಾಲೇಜು, ಎಸ್​ಡಿಎಂ ರಕ್ತ ಭಂಡಾರ, ರಾಷ್ಟ್ರೊತ್ಥಾನ ಪರಿಷತ್​ ಮತ್ತು ಕರ್ನಾಟಕ ಕ್ಯಾನ್ಸರ್​ ಆಸ್ಪತ್ರೆ ರಕ್ತ ಭಂಡಾರಗಳ ಸಹಯೋಗದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಅಪಘಾತ ಹಾಗೂ ಶಸ್ತ್ರ ಚಿಕಿತ್ಸೆ ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಇದೆ. ಆದರೆ, ಜನರಿಗೆ ರಕ್ತ ದಾನದ ಸರಿಯಾದ ಮಾಹಿತಿ ಇರದ ಕಾರಣ ರಕ್ತ ನೀಡಲು ಹಿಂಜರಿಯುತ್ತಾರೆ. ರಕ್ತ ಕೃತಕವಾಗಿ ತಯಾರಿಸಲು ಸಾಧ್ಯವಾಗದ ಅಮೂಲ್ಯ ಸಂಪನ್ಮೂಲ. ಯುವ ಜನತೆ ರಕ್ತ ದಾನದ ಮಹತ್ವ ಸಾರುವ ಮೂಲಕ ರಕ್ತದಾನಕ್ಕೆ ಪ್ರೇರೇಪಿಸಲಿ ಎಂದರು.

ಕ್ಯಾನ್ಸರ್​ ಆಸ್ಪತ್ರೆಯ ಡಾ. ಉಮೇಶ ಹಳ್ಳಿಕೇರಿ ಮಾತನಾಡಿ, ವ್ಯಕ್ತಿಯ ತೂಕ ಹಾಗೂ ಆರೋಗ್ಯ ಸರಿಯಾದ ಕ್ರಮದಲ್ಲಿದ್ದರೆ ಮಾತ್ರ 3 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಇದು ದೇಹದಲ್ಲಿನ ಕೊಲೆಸ್ಟ್ರಾಲ್​ ಕಡಿಮೆ ಮಾಡುವುದಲ್ಲದೇ, ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಕಡಿಮೆ ಮಾಡುತ್ತದೆ. ಜೀವನದ ಗುಣಮಟ್ಟ ಸುಧಾರಿಸಲು ಸಹಾಯ ಮಾಡುತ್ತದೆ ಎಂದರು.

ಕಿಮ್ಸ್​ ನಿವೃತ್ತ ಸರ್ಜನ್​ ಡಾ. ಸಿದ್ದೇಶ್ವರ ಕಡಕೋಳ ಮಾತನಾಡಿ, ರಕ್ತ ದಾನದಂತೆ ಅಂಗಾಂಗ ದಾನವೂ ಮುಖ್ಯ. ವ್ಯಕ್ತಿ ತನ್ನ ಜೀವಿತಾವಧಿಯಲ್ಲೇ ಅಂಗಾಂಗಗಳನ್ನು ದಾನ ಮಾಡುವುದರಿಂದ ಅಂಗಾಂಗ ವೈಫಲ್ಯತೆಯಿಂದ ಬಳಲುತ್ತಿರುವವರಿಗೆ, ಅಪಘಾತಗಳಲ್ಲಿ ದೈಹಿಕ ವಿಕಲತೆ ಹೊಂದಿದವರಿಗೆ ಮರು ಜೋಡಣೆ ಮಾಡಿ ಮತ್ತೆ ಹೊಸ ಜೀವ ಕಳೆ ನೀಡಬಹುದು ಎಂದರು.

ಶಿಬಿರದಲ್ಲಿ 295 ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ದತ್ತಮೂರ್ತಿ ಕುಲಕರ್ಣಿ, ಡಾ. ಕೆ. ನಾಗಚಂದ್ರ, ಡಾ. ಸೂರಜ್​ ಜೈನ್​, ಮಹಾವೀರ ಉಪಾಧ್ಯೆ, ಮಂಜುನಾಥ ಜಿ.ಪಿ, ಇತರರು ಇದ್ದರು.

ಡಾ. ಶಿಲ್ಪಾ ದಾನಪ್ಪಗೌಡರ ಸ್ವಾಗತಿಸಿದರು. ಭವಾನಿ ಜೋಶಿ ನಿರೂಪಿಸಿದರು. ಭಲಭೀಮ ಹಾವನೂರ ವಂದಿಸಿದರು.