ಜಿಲ್ಲೆ

ಕಾರ್ಮಿಕರ ರಕ್ಷಣೆಗಾಗಿ ಕಾನೂನು ಜಾರಿಯಾಗಲಿ: ಗೃಹ ಕಾರ್ಮಿಕರ ವೃತ್ತಿ ಸಂಘಟನೆಯ ಜಿಲ್ಲಾಧ್ಯಕ್ಷೆ ಲಲಿತಮ್ಮ ಒತ್ತಾಯ

ಕೆ.ಎನ್.ರಾಘವೇಂದ್ರ

ಮಂಡ್ಯ: ಗೃಹ ಕಾರ್ಮಿಕರಿಗಾಗಿ ರಾಷ್ಟ್ರೀಯ ಕಾನೂನನ್ನು ಜಾರಿಗೆ ತರಲು ಸರ್ಕಾರಕ್ಕೆ ಸುಪ್ರೀಂ ನ್ಯಾಯಾಲಯ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಗೃಹ ಕಾರ್ಮಿಕರ ರಕ್ಷಣೆಗಾಗಿ ಸೂಕ್ತ ಕಾನೂನುಗಳನ್ನು ಜಾರಿ ಮಾಡಲು ಸರ್ಕಾರ ಮುಂದಾಗಬೇಕು ಎಂದು ಗೃಹ ಕಾರ್ಮಿಕರ ವೃತ್ತಿ ಸಂಘಟನೆಯ ಜಿಲ್ಲಾಧ್ಯಕ್ಷೆ ಲಲಿತಮ್ಮ ಒತ್ತಾಯಿಸಿದರು.

ಗೃಹ ಕಾರ್ಮಿಕರಿಗೆ ಯಾವುದೇ ರೀತಿಯ ಕಾನೂನಿನ ರಕ್ಷಣೆಯಿಲ್ಲದೇ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಗೃಹ ಸಂಬಂಧಿತ ಕೆಲಸಗಳಲ್ಲಿ ಹೆಚ್ಚಾಗಿ ಕೊಳಚೆ ಪ್ರದೇಶದಲ್ಲಿ ವಾಸಿಸುವ ಬಡ ಮಹಿಳೆಯರು, ಅವಿದ್ಯಾವಂತ ಪರಿಶಿಷ್ಟರೇ ಹೆಚ್ಚಾಗಿದ್ದಾರೆ. ಅವರ ಜೀವನ ನಿರ್ವಹಣೆ, ಕುಟುಂಬದ ಬೆಳವಣಿಗೆಗೆ ಇತರರ ಮನೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಕನಿಷ್ಟ ವೇತನದ ನಿಗದಿಯು ಆಗದೆ ಜೀವನ ನಿರ್ವಹಿಸಲು ಕಷ್ಟಕರವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಗೃಹ ಕಾರ್ಮಿಕರು ಬಹುತೇಕ ಮಹಿಳೆಯರೇ ಆಗಿದ್ದು, ಜಿಲ್ಲೆಯಲ್ಲಿ ಸಂಘಟನೆಗೆ 1,300 ಸದಸ್ಯರು ನೋಂದಾಯಿತರಾಗಿದ್ದಾರೆ. ಗೃಹ ಕಾರ್ಮಿಕರಿಗೆ ನೀಡಬೇಕಾದ ಸವಲತ್ತುಗಳು ಹಾಗೂ ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ ಜು.9ರಂದು ಆಲ್ ಇಂಡಿಯ ಗೃಹ ಕಾರ್ಮಿಕರ ಹೋರಾಟದಲ್ಲಿ ಭಾಗವಹಿಸುವುದಾಗಿ ತಿಳಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೋಭಾ, ಪಂಕಜಾ, ಮಂಜುಳಾ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ ಇದ್ದರು.