ಜಗದೀಶ ಹೊಂಬಳಿ ಬೆಳಗಾವಿ
ಸಾಕು ಪ್ರಾಣಿಗಳಲ್ಲಿ ‘ನಾಯಿ’ ಬಹಳ ಜನಪ್ರಿಯವಾಗಿದೆ. ಬಹಳಷ್ಟು ಜನರು ‘ಸಾಕು ನಾಯಿ’ಗಳ ಮೇಲೆ ತಮ್ಮ ಪ್ರಾಣವನ್ನೇ ಇಟ್ಟುಕೊಂಡಿದ್ದಾರೆ. ಸಾಕಿದ ನಾಯಿಗಳು ಬಹುತೇಕ ಕುಟುಂಬಗಳ ಸದಸ್ಯರ ಪೈಕಿ ಒಬ್ಬರಂತಾಗಿ ಬಿಟ್ಟಿವೆ. ಕೆಲ ಮನೆಗಳಲ್ಲಂತೂ ಮನೆ ಮಕ್ಕಳಂತೆ ಜೋಪಾನ ಮಾಡುತ್ತಾರೆ. ಯರಗಟ್ಟಿಯ ಹೋಟೆಲ್ ಉದ್ಯಮಿ ಗಿರೀಶ ಪಾಟೀಲ ಮೂರು ನಾಯಿಗಳನ್ನು ಮಕ್ಕಳಂತೆ ಸಲಹುತ್ತಿದ್ದು ಮಾದರಿಯಾಗಿದ್ದಾರೆ.
ರಾಕಿ, ಮ್ಯಾಕ್ಸ್, ಜಾಕ್ಸ್ ಎಂದು ಹೆಸರಿಟ್ಟಿದ್ದಾರೆ. ಮ್ಯಾಕ್ಸ್-ಜಾಕ್ಸ್ ಅವಳಿ ನಾಯಿಗಳಾಗಿವೆ. ಇವುಗಳ ಆರೈಕೆಗೆ ಇಬ್ಬರು ನೌಕರರನ್ನೇ ನೇಮಿಸಿದ್ದಾರೆ. ಪ್ರತಿದಿನ ಬ್ರಷ್ ಮಾಡಿಸುವುದು, ಊಟ-ಉಪಾಹಾರ ನೀಡುವುದು, ಸಂಜೆ ಸ್ನಾಕ್ಸ್ ಸ್ನಾಕ್ಸ್‌ಗೆ ನಾನ್‌ವೆಜ ಸ್ಟಿಕ್ಸ್ ನೀಡುವುದು, ನಂತರ 1 ಗಂಟೆ ವಾಕಿಂಗ್ ಕರೆದುಕೊಂಡು ಹೋಗುವುದು ನೌಕರರ ಕರ್ತವ್ಯವಾಗಿದೆ. ಆಹಾರ ಮೆನ್ಯೂ ಕೂಡ ಶಿಸ್ತುಬದ್ಧವಾಗಿದೆ. ಎಗ್, ಚಿಕ್ಕನ್, ಮಟನ್, ಚಪಾತಿ, ಹಾಲು, ರೈಸ್ ಕೊಡುತ್ತಾರೆ. ವಾರದಲ್ಲಿ ಮೂರು ದಿನ ಮಸಾಲೆ ಇಲ್ಲದ ಬೇಯಿಸಿದ ಮಟನ್, ನಾಲ್ಕು ಬಾರಿ ಚಿಕ್ಕನ್ ಕೊಡುತ್ತಾರೆ. ಆಹಾರ ಕೊಡುವುದರಲ್ಲಿ ವ್ಯತ್ಯಾಸವಾದರೆ ನಾಯಿಗಳೇ ಹೇಳುತ್ತವೆ. ಆರೋಗ್ಯದಲ್ಲಿ ಏರುಪೇರಾದರೂ ತಮ್ಮದೆ ಶೈಲಿಯಲ್ಲಿ ಹೇಳಿಕೊಂಡು ಪರಿಹರಿಸಿಕೊಳ್ಳುತ್ತವೆಯಂತೆ. ಇನ್ನು ಎಸಿ ಕೊಠಡಿಗಳಲ್ಲೇ ವಿಶ್ರಾಂತಿ ಪಡೆಯುವ ನಾಯಿಗಳ ಆರೋಗ್ಯ ನಿಯಮಿತವಾಗಿ ತಪಾಸಣೆ ಮಾಡಿ, ಲಸಿಕೆ ಹಾಕಿಸಿರುವ ಬುಕ್ ನಿರ್ವಹಣೆ ಮಾಡಲಾಗುತ್ತಿದೆ. 5 ವರ್ಷಗಳಿಂದ ಉದ್ಯಮಿ ಗಿರೀಶ ಪಾಟೀಲ ನಾಯಿಗಳಿಗೆ ಐಷಾರಾಮಿ ಸೌಲಭ್ಯ ಕಲ್ಪಿಸಿ, ಮಕ್ಕಳಿಗಿಂತ ಹೆಚ್ಚು ಪ್ರೀತಿಸುತ್ತಿದ್ದಾರೆ.
ಹೋಟೆಲ್ ಉದ್ಯಮಿ:
ಗಿರೀಶ ಪಾಟೀಲ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಈಗ ಯರಗಟ್ಟಿಯ ಬೆಳಗಾವಿ ರಸ್ತೆಯಲ್ಲಿ ‘ಎಚ್.ಆರ್. ಹೋಟೆಲ್’ ನಡೆಸುತ್ತಿದ್ದಾರೆ. ಹೋಟೆಲ್‌ನಲ್ಲಿ 5 ದೊಡ್ಡ ನಾಯಿಗಳಿದ್ದು, 9 ನಾಯಿ ಮರಿ, 2 ಬೆಕ್ಕು, 5 ಮೊಲ ಸಾಕಿದ್ದಾರೆ. ಹೋಟೆಲ್‌ನಲ್ಲಿ 26 ಸಿಬ್ಬಂದಿ ಕೆಲಸ ಮಾಡುತ್ತಿದ್ದು, ಅವರು ಊಟ ಮಾಡುವ ಆಹಾರವನ್ನೇ ಈ ಸಾಕು ಪ್ರಾಣಿಗಳಿಗೆ ನೀಡುತ್ತಿದ್ದಾರೆ. ಹೋಟೆಲ್‌ನಲ್ಲಿರುವ ನಾಯಿಗಳು ಲೋಕಲ್ ಜವಾರಿ ನಾಯಿಗಳಾಗಿವೆ.
ಬೇರೆಯವರು ಸಾಕಿದ್ದಾರೆಂದು ನಾಯಿಗಳನ್ನು ಸಾಕಬಾರದು. ಪ್ರಾಣಿಗಳನ್ನು ಸಾಕುವುದಕ್ಕೆ ತಯಾರಿ ಮಾಡಿಕೊಳ್ಳಬೇಕು. ಸಾಕಿದರೆ ಅವುಗಳಿಗೆ ನ್ಯಾಯ ಕೊಡಬೇಕು. ಬಹಳಷ್ಟು ಸಾಕು ನಾಯಿಗಳು ಕುಟುಂಬಗಳ ಕಷ್ಟ-ಸುಖಗಳಲ್ಲಿ ಭಾಗಿಯಾಗಿವೆ. ಪ್ರಾಣಿಗಳ ಬಗ್ಗೆ ಕಾಳಜಿ ಇರಲಿ. ಹೋಟೆಲ್ ಉದ್ಯಮಿ ಗಿರೀಶ ಪಾಟೀಲ ನಾಯಿಗಳ ಬಗ್ಗೆ ಅಪಾರ ಕಾಳಜಿಯಿದೆ ಎಂದು ಪಶು ವೈದ್ಯ ಮಹಾದೇವಗೌಡ ಪಾಟೀಲ ಪ್ರತಿಕ್ರಿಯಿಸಿದ್ದಾರೆ.
ಗ್ರೇಟೆನ್ ತಳಿಯ ಒಂದು, ಲ್ಯಾಬ್ ತಳಿಯ ಎರಡು ನಾಯಿಗಳನ್ನು ಸಾಕಿದ್ದೇವೆ. ಅವು ನಮ್ಮ ಮನೆ ಮಕ್ಕಳಂತಾಗಿವೆ. ನಮ್ಮ ಹೋಟೆಲ್‌ನಲ್ಲೂ 14 ನಾಯಿ ಸಾಕಿದ್ದೇವೆ. ಅವುಗಳೊಂದಿಗೆ ಹೆಚ್ಚು ಒಡನಾಡವಿದೆ. ನಮ್ಮ ಮಾತುಗಳು ಅವುಗಳಿಗೆ ತಿಳಿಯುತ್ತವೆ ಎಂದು ಉದ್ಯಮಿ ಗಿರೀಶ ಪಾಟೀಲ ಹೇಳುತ್ತಾರೆ.