ಜಿಲ್ಲೆ

ಶ್ವಾನಗಳಿಗೆ ಕಂಟಕವಾದ ಚರ್ಮ ತುರಿಕೆ ರೋಗ

Kopala - Desk - Eraveni

ಲಿಂಗಸುಗೂರು: ಪಟ್ಟಣ ಸೇರಿ ಹಳ್ಳಿಗಳಲ್ಲಿ ಬೀದಿ ನಾಯಿಗಳಿಗೆ ಚರ್ಮ ತುರಿಕೆ ರೋಗ ಕಾಣಿಸಿಕೊಂಡು ವ್ಯಾಪಿಸುತ್ತಿದ್ದು, ಜನರಿಗೆ ರೋಗ ಹರಡುವ ಆತಂಕ ಎದುರಾಗಿದೆ.

ಮನುಷ್ಯ, ಸಾಕುಪ್ರಾಣಿಗಳೊಂದಿಗೆ ವಾಸ, ಅಲೆದಾಟ, ಸ್ಪರ್ಶ, ನಿದ್ರೆ, ಚಿನ್ನಾಟ, ಕಿತ್ತಾಟ ದೈನಂದಿನ ಕ್ರಿಯೆಯಾಗಿದೆ. ಇದಕ್ಕೆ ನಾಯಿಗಳು ಕೂಡ ಹೊರತಾಗಿಲ್ಲ. ಚರ್ಮ ತುರಿಕೆ ಕಾಯಿಲೆ ಅಂಟು ರೋಗವಾಗಿದ್ದು, ಗುಂಪಾಗಿ ಓಡಾಡುವ ನಾಯಿಗಳಲ್ಲಿ ಒಂದು ನಾಯಿಗೆ ಈ ರೋಗ ಕಂಡು ಬಂದರೆ, ಇತರ ಶ್ವಾನಗಳಿಗೂ ಹರಡುತ್ತದೆ.

ಇದರಿಂದ ಬಳಲುವ ನಾಯಿಗಳು ದಿನದ ಇಪ್ಪತ್ನಾಲ್ಕು ಗಂಟೆಗಳ ಕಾಲ ತುರಿಕೆ ಜಾಗಕ್ಕೆ ಬಾಯಿಯಿಂದ ಕಚ್ಚುವುದು ಮತ್ತು ಕಾಲುಗಳಿಂದ ತುರಿಸಿಕೊಳ್ಳುತ್ತ ಅಲೆಯುತ್ತವೆ. ನಿದ್ರೆ, ನೀರಡಿಕೆ, ಆಹಾರ ಸೇವನೆ ಮಾಡದೆ ಕೇವಲ ತುರಿಸಿಕೊಳ್ಳುವುದರಲ್ಲಿಯೇ ಕಾಲ ಕಳೆದು ಮೈತುಂಬ ರಕ್ತ ಸಿಕ್ತ ಗಾಯ ಮಾಡಿಕೊಂಡು ಕೊನೆಗೆ ನಿಶ್ಯಕ್ತಿ ಹೊಂದಿ ಪ್ರಾಣ ಬಿಡುವ ಸಾಧ್ಯತೆಯೇ ಹೆಚ್ಚಿದೆ.

ಮನುಷ್ಯ ಮತ್ತು ಪ್ರಾಣಿ, ಪಕ್ಷಿ ಸಂಕುಲಕ್ಕೆ ರೋಗಗಳು ಬರುವುದು ಸಾಮಾನ್ಯ. ಆದರೆ ನಿಗದಿತ ಸಮಯಕ್ಕೆ ಆರೈಕೆ, ಚಿಕಿತ್ಸೆ ದೊರೆತರೆ ಆರೋಗ್ಯ ಕಾಪಾಡಿಕೊಳ್ಳಬಹುದು. ಇಲ್ಲದಿದ್ದರೆ ಸಂಕಷ್ಟ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ನಾಯಿಗಳಿಗೆ ಹರಡುತ್ತಿರುವ ಚರ್ಮ ತುರಿಕೆ ರೋಗ ನಿಯಂತ್ರಣಕ್ಕೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೆ ರೋಗ ಸಂಪೂರ್ಣ ನಿವಾರಣೆಯಾಗಲಿದೆ.

ಸಾಕಿದ ಶ್ವಾನಕ್ಕೆ ಮಾಲೀಕರು ಕಾಳಜಿ ವಹಿಸುವರು. ಆದರೆ, ಬೀದಿ ನಾಯಿಗಳ ಗತಿಯೇನು?. ಅವುಗಳನ್ನು ಹಿಡಿದು ಚಿಕಿತ್ಸೆ ಕೊಡಿಸುವವರು ಯಾರು ಎಂಬ ಪ್ರಶ್ನೆ ಉದ್ಭವಿಸಿದೆ. ಜನರಿಗೆ ಹರಡುವ ಮೊದಲೇ ಈ ಕುರಿತು ಸಂಬಂಧಿಸಿದವರು ತ್ವರಿತವಾಗಿ ಕ್ರಮಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.

ರೈತ ಸಂಘದ ಜಿಲ್ಲಾಧ್ಯಕ್ಷಶಿವಪುತ್ರಗೌಡ ಜಾಗೀರನಂದಿಹಾಳಹಳ್ಳಿಗಳಲ್ಲಿ ಬೀದಿ ನಾಯಿಗಳು ಚರ್ಮ ತುರಿಕೆ ರೋಗದಿಂದ ಬಳಲುತ್ತಿವೆ. ಜಾಗೀರ ನಂದಿಹಾಳ ಗ್ರಾಮದಲ್ಲಿ ರೋಗ ಪೀಡಿತ ನಾಯಿಗಳನ್ನು ಮುಟ್ಟಿದ ಮಕ್ಕಳಿಗೂ ತುರಿಕೆ ಕಾಣಿಸಿಕೊಳ್ಳುತ್ತಿದೆ. ಗ್ರಾಪಂ ಅಧಿಕಾರಿಗಳು ಬೀದಿ ನಾಯಿಗಳನ್ನು ಹಿಡಿದು ಚಿಕಿತ್ಸೆ ಕೊಡಿಸಬೇಕು. ಪಶು ಸಂಗೋಪನಾ ಇಲಾಖೆ ಅಧಿಕಾರಿ, ಲಿಂಗಸುಗೂರುಡಾ.ರಾಚಪ್ಪನಾಯಿಗಳಿಗೆ ಹರಡಿದ ಚರ್ಮ ತುರಿಕೆ ರೋಗಕ್ಕೆ ಚಿಕಿತ್ಸೆ ಲಭ್ಯವಿದ್ದು, ಔಷಧೋಪಚಾರದಿಂದ ಮೂರ‌್ನಾಲ್ಕು ದಿನದಲ್ಲಿ ನಿಯಂತ್ರಿಸಬಹುದು. ಸಾಕು ನಾಯಿಗೆ ಮಾಲೀಕರು ಚಿಕಿತ್ಸೆ ಕೊಡಿಸುತ್ತಾರೆ. ಆದರೆ, ರೋಗ ಪಿಡಿತ ನೂರಾರು ಬೀದಿ ನಾಯಿಗಳನ್ನು ಹಿಡಿದು ಚಿಕಿತ್ಸೆಗಾಗಿ ತರುವುದು ಕಷ್ಟ ಸಾಧ್ಯ.