ಜಿಲ್ಲೆ

ಕುಶಾಲನಗರದಲ್ಲಿ ಗಮನ ಸೆಳೆದ ಶ್ವಾನ ಪ್ರದರ್ಶನ

ಸುನಿಲ್ ಪೊನ್ನೇಟಿ

ಕುಶಾಲನಗರ:

ಕುಶಾಲನಗರ ಇನ್ನರ್ ವೀಲ್ ಸಂಸ್ಥೆಯ ಹತ್ತನೇ ವಾರ್ಷಿಕೋತ್ಸವ ಅಂಗವಾಗಿ ಸ್ಥಳೀಯ ಗಾಯತ್ರಿ ಕಲ್ಯಾಣ ಮಂಟಪ ಆವರಣದಲ್ಲಿ ಭಾನುವಾರ ಶ್ವಾನ ಮತ್ತು ಬೆಕ್ಕುಗಳ ಪ್ರದರ್ಶನ ಆಯೋಜಿಸಲಾಗಿತ್ತು. ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಶ್ವಾನಗಳ ಮಾಲೀಕರು ತಮ್ಮ ವಿವಿಧ ತಳಿಯ ಶ್ವಾನಗಳನ್ನು ತಂದು ಪ್ರದರ್ಶಿಸಿದರು. ಬೆಕ್ಕುಗಳನ್ನೂ ಪ್ರದರ್ಶಿಸುವ ಮೂಲಕ ಗಮನ ಸೆಳೆದರು.

ಗುಡ್ಡೆಹೊಸೂರು ಗ್ರಾಮದ ವರ್ಷ ಮಾಲಿಕತ್ವದ ಹಸ್ಕಿ ಜಾತಿಯ ಅರ್ಜುನ ಶ್ವಾನ ಪ್ರಥಮ ಸ್ಥಾನ ಪಡೆಯಿತು. ಇಲ್ಲಿನ ಬಸವೇಶ್ವರ ಬಡಾವಣೆ ಅರುಂಧತಿ ಮಾಲಿಕತ್ವದ ಗೋಲ್ಡನ್ ರಿಟ್ರೀವರ್ ತಳಿಯ ಅಧಿ ದ್ವಿತೀಯ ಬಹುಮಾನ ಪಡೆಯಿತು. ಗುಮ್ಮನಕೊಲ್ಲಿಯ ಹೇಮಂತ್ ಅವರ ಶೀಟ್ಜು ತಳಿಯ ಲೂನ, ಗಂಧದಕೋಠಿಯ ಯಾಧವ್ ಅವರ ಬ್ರೂನೋ ಹೆಸರಿನ ರಾಟ್ವಿಲ್ಲರ್, ಕುಶಾಲನಗರದ ರಂಜನ್ ಅವರ ಬ್ರೋನೋ ಹೆಸರಿನ ಶ್ವಾನಗಳು ವಿವಿಧ ಬಹುಮಾನಗಳಿಗೆ ಆಯ್ಕೆಯಾದವು.

ದಂಡಿನಪೇಟೆಯ ಶಾಹಿನ ಅವರ ಬೆಕ್ಕು ಮುಸಖಾನ್ ಮೊದಲ ಸ್ಥಾನ ಪಡೆಯಿತು. ಧರಣಿ ಸೋಮಯ್ಯ ಅವರ ಟಾರ್ಜನ್ ದ್ವಿತೀಯ ಹಾಗೂ ಸರಿತಾ ರೈ ಅವರ ರಿಕ್ಕಿಬೆಕ್ಕು ತೃತೀಯ ಸ್ಥಾನ ಪಡೆದವು.

ಇದಕ್ಕೂ ಮೊದಲು ಶ್ವಾನ ಪ್ರದರ್ಶನ ಉದ್ಘಾಟಿಸಿದ ಇನ್ನರ್ ವೀಲ್ ಸಂಸ್ಥೆಯ ಅಧ್ಯಕ್ಷೆ ಚಿತ್ರ ರಮೇಶ್ ಮಾತನಾಡಿ, ಸಾಕು ಪ್ರಾಣಿಗಳು ಮನೆಯಲ್ಲಿ ಇದ್ದರೆ ಸಾಕಷ್ಟು ಪ್ರಯೋಜನಗಳನ್ನು ಕಾಣಬಹುದು. ಒಳ್ಳೆ ಜಾತಿಯ ಶ್ವಾನ ಮನೆಯಲ್ಲಿ ಒಂದು ಇದ್ದರೂ ಸಾಕು ಅದು ಹತ್ತು ಜನರಿಗೆ ಸಮ. ಸಾಕು ಪ್ರಾಣಿಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಶ್ವಾನ ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.

ಕ್ಲಬ್ ಕಾರ್ಯದರ್ಶಿ ಸೀತಾಲಕ್ಷ್ಮಿ, ಪದಾಧಿಕಾರಿಗಳಾದ ನೇಹಾ ಜಗದೀಶ್, ರೇಖಾ ಗಂಗಾಧರ್, ಭಾರತಿ ದೇವಯ್ಯ, ದಿವ್ಯ ಸುಜಯ್, ಸುನೀತಾ ಮಹೇಶ್, ಜಾಸ್ಮಿನ್, ಕವಿತಾ ಸಾತಪ್ಪನ್ ಹಾಗೂ ಸದಸ್ಯರು ಪಾಲ್ಗೊಂಡಿದ್ದರು.

ಬೈಲಕುಪ್ಪೆ ಡೋಲ್ಮ ಡಾಗ್ ರೆಸ್ಕ್ಯೂ ಹೌಸ್ ಮಾಲೀಕ ಕೈಸಂಗ್ ದೊರ್ಜಿ ಮತ್ತು ಪಶು ವೈದ್ಯಾಧಿಕಾರಿ ಡಾ. ಶಶಿಧರ್ ಎನ್. ಕ್ಯಾತರಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.