ಸಚಿವ ಯು.ಟಿ. ಖಾದರ್ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿಪತ್ತು ನಿರ್ವಹಣೆ ಸಭೆ ನಡೆಯಿತು. ಶಾಸಕರಾದ ವೇದವ್ಯಾಸ ಕಾಮತ್, ಭಾಗೀರಥಿ ಮುರುಳ್ಯ, ಐವನ್ ಡಿಸೋಜಾ, ಮಂಜುನಾಥ ಭಂಡಾರಿ, ಕಿಶೋರ್ ಕುಮಾರ್ ಪುತ್ತೂರು ಉಪಸ್ಥಿತರಿದ್ದರು.
- ವಿಪತ್ತು ನಿರ್ವಹಣೆ ಸಭೆಯಲ್ಲಿ ಡಾ. ಯು.ಟಿ. ಖಾದರ್ ಕಳವಳ
ಮಂಗಳೂರು: ಬೀದಿನಾಯಿಗಳಿಗೆ ವರ್ಷಂಪ್ರತಿ ಸಂತಾನ ಹರಣದ ಶಸ್ತ್ರಚಿಕಿತ್ಸೆಯನ್ನು ಮಾಡುತ್ತಿದ್ದರೂ, ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರು ಕಳವಳ ವ್ಯಕ್ತಪಡಿಸಿದರು.
ಅವರು ಭಾನುವಾರ ಪ್ರಜಾಸೌಧದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ವಿಪತ್ತು ನಿರ್ವಹಣೆ ಹಾಗೂ ಕುಡಿಯುವ ನೀರಿನ ನಿರ್ವಹಣೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಮೀಣ ಭಾಗಕ್ಕಿಂತಲೂ ನಗರಗಳಲ್ಲಿ ಬೀದಿನಾಯಿಗಳ ಸಂಖ್ಯೆ ಏರುತ್ತಲೇ ಹೋಗುತ್ತಿರುವುದು ಯಾಕೆ? ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿದರೂ ಸಂಖ್ಯೆ ಕುಗ್ಗುತ್ತಿಲ್ಲ ಏಕೆ? ಎಂದು ಸಚಿವರು ಅಧಿಕಾರಿಗಳನ್ನು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ರವಿಚಂದ್ರ ನಾಯಕ್, ಇಲ್ಲಿ ಸಮಸ್ಯೆಯಾಗುತ್ತಿರುವುದು ಮನೆಯಲ್ಲಿ ನಾಯಿ ಸಾಕುವವರಿಂದ. ಒಂದು ಕಡೆಯಿಂದ ನಾವು ಬೀದಿನಾಯಿಗಳಿಗೆ ಶಸ್ತ್ರಚಿಕಿತ್ಸೆ ಮಾಡಿಸುತ್ತಾ ಹೋಗುತ್ತೇವೆ. ಇನ್ನೊಂದೆಡೆ ಮನೆಯಲ್ಲಿನ ಸಾಕುನಾಯಿಗಳ ಮರಿಗಳನ್ನು ಬೀದಿಗೆ ತಂದು ಬಿಡುತ್ತಾರೆ. ಅವುಗಳು ಸಂತಾನೋತ್ಪತ್ತಿ ಮಾಡುತ್ತವೆ. ಹೀಗಾಗಿ ಬೀದಿನಾಯಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಹೇಳಿದರು.
ಪುನರ್ವಸತಿಗೆ 12.5 ಎಕರೆ ಜಾಗ ಗುರುತು
ಮಂಗಳೂರು ನಗರ ಭಾಗದಲ್ಲೇ ಸುಮಾರು 53 ಸಾವಿರ ಬೀದಿನಾಯಿಗಳಿವೆ. ಮುಂದಿನ ದಿನಗಳಲ್ಲಿ ಇವುಗಳ ಪುನರ್ವಸತಿಗಾಗಿ ಬೊಂಡಂತಿಲದಲ್ಲಿ 12.5 ಎಕರೆ ಜಾಗ ಗುರುತಿಸಲಾಗಿದೆ. ಇದಕ್ಕಾಗಿ ಬಜೆಟ್‌ನಲ್ಲಿ 1 ಕೋಟಿ ರೂ. ಅನುದಾನವನ್ನು ಮೀಸಲಿರಿಸಲಾಗಿದೆ. ಈಗಾಗಲೇ ಮಂಗಳೂರಿನ ಶಕ್ತಿನಗರದಲ್ಲಿ ಖಾಸಗಿ ಪುನರ್ವಸತಿ ಕೇಂದ್ರವಿದೆ. ಮುಂದೆ ಪುತ್ತೂರು, ಬಂಟ್ವಾಳದಲ್ಲೂ ಬೀದಿನಾಯಿಗಳ ಪುನರ್ವಸತಿ ಕೇಂದ್ರಕ್ಕೆ ಚಿಂತನೆ ನಡೆಸಲಾಗಿದೆ ಎಂದು ಪಾಲಿಕೆಯ ಆಯುಕ್ತ ರವಿಚಂದ್ರ ನಾಯಕ್ ಅವರು ಹೇಳಿದರು.
ಐವರು ವೈದ್ಯರಿಗೆ ಕಾರ್ಯಾದೇಶ
ವೈದ್ಯರ ನೇಮಕ ಎಲ್ಲಿಗೆ ಬಂತು ಎಂದು ಸಚಿವರು ಪ್ರಶ್ನಿಸಿದಾಗ, ಡಿಎಚ್‌ಒ ಡಾ. ಎಚ್.ಆರ್. ತಿಮ್ಮಯ್ಯ ಅವರು ಪ್ರತಿಕ್ರಿಯಿಸಿ ಗ್ರಾಮೀಣ ಭಾಗದಲ್ಲಿ 64, ನಗರ ಭಾಗದಲ್ಲಿ 12 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. 3 ಕಡೆ ವೈದ್ಯರ ಕೊರತೆ ಇದೆ. ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸಲು 9 ವೈದ್ಯರು ಮುಂದೆ ಬಂದಿದ್ದಾರೆ. ಅವರಲ್ಲಿ ಐವರಿಗೆ ಈಗಾಗಲೇ ಕಾರ್ಯಾದೇಶ ನೀಡಲಾಗಿದೆ ಎಂದು ಹೇಳಿದರು. ಮಲೇರಿಯಾ, ಡೆಂಗ್ಯೂ, ಇಲಿಜ್ವರ ಮೊದಲಾದ ಸಾಂಕ್ರಾಮಿಕ ರೋಗಗಳ ಬಗ್ಗೆ ವ್ಯಾಪಕ ಜಾಗೃತಿ ವಹಿಸುವಂತೆ ಸಚಿವರು ಸೂಚಿಸಿದರು.
ನದಿಯಲ್ಲಿನ ಹೂಳೆತ್ತಿ
ನಗರ ಭಾಗದ ರಾಜಕಾಲುವೆ ಹೂಳೆತ್ತಿದರೂ, ಅವುಗಳು ಸೇರುವ ನದಿಗಳಲ್ಲಿ ಹೂಳು ತುಂಬಿಕೊಂಡಿರುವುದರಿಂದ ನೀರು ಕಾಲುವೆಗೇ ಹಿಮ್ಮುಖವಾಗಿ ಚಲಿಸುತ್ತಿದೆ. ಪ್ರತೀವರ್ಷ ಹೂಳೆತ್ತದ ಕಾರಣ ನಗರದಲ್ಲಿ ಪ್ರವಾಹ ಹೆಚ್ಚುತ್ತಿದೆ ಎಂದು ವೇದವ್ಯಾಸ ಕಾಮತ್ ಹೇಳಿದರು. ಪ್ರತಿಕ್ರಿಯಿಸಿದ ಡಿಸಿ, ಗುರುಪುರ, ನೇತ್ರಾವತಿ ನದಿಯಲ್ಲಿ ಹೂಳು ಇರುವುದು ನಿಜ ಎಂದರು. ಈ ಬಗ್ಗೆ ವರದಿ ತಯಾರಿಸಿ ಕೊಡಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.
ಸಮನ್ವಯದಿಂದ ಕಾರ್ಯನಿರ್ವಹಿಸಿ
ಮಳೆಗಾಲದ ವಿಪತ್ತು ನಿರ್ವಹಣೆಯಲ್ಲಿ ಕಂದಾಯದ ಜೊತೆಗೆ ಪಿಡಬ್ಲ್ಯೂಡಿ, ಆರ್‌ಡಿಪಿಆರ್, ಮೆಸ್ಕಾಂ, ಅಗ್ನಿಶಾಮಕ ಮತ್ತು ಪೊಲೀಸ್ ಮುಂತಾದ ಇಲಾಖೆಯ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಒಬ್ಬರನ್ನೊಬ್ಬರು ದೂರುತ್ತಾ ಕಾಲ ಕಳೆಯುವುದಲ್ಲ ಎಂದರು.
ಹೆದ್ದಾರಿ ಕಾಮಗಾರಿಗೆ ಏನದು ತೊಂದರೆ?
ಮುಖ್ಯವಾಗಿ ನಂತೂರು, ತೊಕ್ಕೊಟ್ಟು ಮುಂತಾದ ಭಾಗಗಳಲ್ಲಿ ಹೆದ್ದಾರಿ ಕಾಮಗಾರಿಗಳ ವಿಳಂಬ ಕುರಿತು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಲ್ಲಿ ಸಚಿವರು ಮಾಹಿತಿ ಪಡೆದರು. ತಾಲೂಕು ಮಟ್ಟದ ಸಭೆಗಳಿಗೆ ಹಾಜರಾಗಲು ಅಧಿಕಾರಿಗಳ ಕೊರತೆ ಇದೆ ಎಂದು ಹೆದ್ದಾರಿ ಅಧಿಕಾರಿ ತಿಳಿಸಿದಾಗ, ಪತ್ರ ಕೊಡಿ ಕೇಂದ್ರದ ಹೆದ್ದಾರಿ ಸಚಿವರಲ್ಲಿ ಮಾತನಾಡಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವೆ ಎಂದು ಸಚಿವರು ಭರವಸೆ ಇತ್ತರು. ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ರಾಜ್ಯದ ಇತರ ಇಲಾಖೆಗಳ ಜೊತೆ ಸಮನ್ವಯದಿಂದ ಕೆಲಸ ಮಾಡಬೇಕು ಎಂದು ಸೂಚಿಸಿದರು.
ತುರ್ತು ಸಹಾಯವಾಣಿ ಸಂಖ್ಯೆ
ವಿಪತ್ತು ಸಂಭವಿಸಿದಾಗ ತುರ್ತು ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದು. ಅರಣ್ಯ (1926), ಮೆಸ್ಕಾಂ (1912), ಪೊಲೀಸ್ (112) ಹಾಗೂ ಜಿಲ್ಲಾಧಿಕಾರಿಗಳಿಗೆ (1077) ಕರೆ ಮಾಡಬಹುದು.
2 ಗಂಟೆ ವಿಳಂಬವಾಗಿ ಬಂದ ಸಚಿವರು
ಸಚಿವ ಯು.ಟಿ. ಖಾದರ್ ಅವರ ಸಭೆ ಭಾನುವಾರ 10.30ಕ್ಕೆ ನಿಗದಿಯಾಗಿತ್ತು. ಅವರನ್ನು ಭೇಟಿಯಾಗಲು 9.30ರಿಂದಲೇ ಸಾರ್ವಜನಿಕರು ಡಿಸಿ ಕಚೇರಿ ಹೊರಗಡೆ ಹಾಜರಿದ್ದರು. ಎಲ್ಲಾ ಅಧಿಕಾರಿಗಳು 10.15ರ ವೇಳೆಗೇ ಹಾಜರಿದ್ದರು. ಆದರೆ ಸಚಿವರು ಬಂದು ಸಭೆ ಪ್ರಾರಂಭ ಮಾಡಿದ್ದು ಮಾತ್ರ 12.30ಕ್ಕೆ. ಭಾನುವಾರ ಅಧಿಕಾರಿಗಳ ರಜಾ ದಿನ ಬೇರೆ. ಕುಟುಂಬದೊಂದಿಗೆ ಕಾಲ ಕಳೆಯುವ ದಿನ. ಈ ದಿನದಲ್ಲೇ ಸಚಿವರು ಸಭೆಯನ್ನು ಕರೆದಿರುವುದಕ್ಕೇ ಅಪಸ್ವರ ಕೇಳಿಬರುತ್ತಿದ್ದವು.
ಹಾಸ್ಟೆಲ್‌ಗಳ ಸ್ವಚ್ಛತೆ, ಮೂಲಸೌಕರ್ಯ ಅಭಿವೃದ್ಧಿಯತ್ತ ನಿಗಾ ಇರಿಸಿ. ಶಿಥಿಲ ಶಾಲಾ ಕೋಣೆಯಲ್ಲಿ ಪಾಠ ಮಾಡಬೇಡಿ. ಅಂಗನವಾಡಿ ಕೇಂದ್ರಗಳು ಶಿಥಿಲವಾಗಿದ್ದರೆ ಮಕ್ಕಳನ್ನು ಸ್ಥಳಾಂತರಿಸಬೇಕು ಎಂದು ಸಚಿವರು ಸೂಚಿಸಿದರು.
ಶಾಸಕರಾದ ವೇದವ್ಯಾಸ ಕಾಮತ್, ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾ, ಮಂಜುನಾಥ ಭಂಡಾರಿ, ಕಿಶೋರ್ ಕುಮಾರ್ ಪುತ್ತೂರು, ನಿಗಮದ ಅಧ್ಯಕ್ಷರುಗಳಾದ ಎಂ.ಎ. ಗಫೂರ್, ಸದಾಶಿವ ಉಳ್ಳಾಲ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಜಿ.ಪಂ. ಸಿಇಒ ನರ್ವಾಡೆ ವಿನಾಯಕ್ ಕಭಾರಿ, ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ಎಸ್ಪಿ ಡಾ. ಅರುಣ್ ಕೆ., ಡಿಸಿಎಫ್ ರವಿಶಂಕರ್ ಉಪಸ್ಥಿತರಿದ್ದರು.
ಮನೆ ಮೇಲೆ ಗುಡ್ಡ ಜರಿದು ವಿಪತ್ತು ಸಂಭವಿಸಿದಾಗ ತುರ್ತಾಗಿ ಸಹಕರಿಸಿದ ಇಲಾಖೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರಿಗೆ ಪ್ರಶಂಸಾ ಪತ್ರವನ್ನು ಸಚಿವರು ವಿತರಿಸಿದರು.
ಸಭೆಯಲ್ಲಿ ಪ್ರಸ್ತಾಪವಾದ ಇತರ ವಿಷಯಗಳು...
- ಮಿಂಚು ನಿರೋಧಕ ಅಳವಡಿಕೆ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಲು ಸಚಿವರ ಸೂಚನೆ
- ರೌಡಿಸಂ ಮಾಡಿದರೆ ನಿಮ್ಮದೇ ಶೈಲಿಯಲ್ಲಿ ಭಯ ಹುಟ್ಟಿಸಲು ಕಮಿಷನರ್ಗೆ ಸೂಚನೆ
- ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಬಹುದಾದಂತಹ ಜಿಲ್ಲೆಯ 88 ಸ್ಥಳಗಳ ಗುರುತು.
- ಮೆಸ್ಕಾಂನ ಎಲ್ಲಾ ಸಬ್‌ಸ್ಟೇಷನ್‌ಗಳಲ್ಲಿ ಕಾರ್ಯಾಚರಣೆ ವಾಹನ ಸನ್ನದ್ಧ.
- 274 ಮಳೆಮಾಪನದಲ್ಲಿ 108 ಕಾರ್ಯಾಚರಣೆ, ಉಳಿದವುಗಳ ರಿಪೇರಿಗೆ ಟೆಂಡರ್ ಆಗಿದೆ.
- ಮಳೆಯಾಗಿದ್ದರೂ, ಜೂನ್‌ನಲ್ಲಿ ಶೇ. 57ರಷ್ಟು ಮಳೆಯ ಕೊರತೆ.
- ಡೊಂಗರಕೇರಿಯ ಒಂದೇ ಕಡೆಯ 15 ಮಂದಿಗೆ ಜಾಂಡೀಸ್ ಪತ್ತೆ.
- ಅಗ್ನಿಶಾಮಕ ದಳದ 16 ಬೋಟುಗಳು ಕಾರ್ಯಾಚರಣೆಗೆ ಸನ್ನದ್ಧ.
- ಪ್ರಾಕೃತಿಕ ವಿಪತ್ತು ಸಂದರ್ಭದ 3 ತಿಂಗಳ ಕಾರ್ಯಕ್ಕೆ ಹೊಸ 80 ಹೋಮ್‌ಗಾರ್ಡ್‌ಗಳ ನೇಮಕ.