ಬೆಂಗಳೂರು: ಮನೆಯಲ್ಲಿ ಸಾಕಿದ್ದ ನಾಯಿಯನ್ನು ಕಂಡ್ರೆ ಮಾರುದ್ದ ಓಡಿಹೋಗುತ್ತಿದ್ದ ಪತ್ನಿ, ಇದೇ ವಿಚಾರವಾಗಿ ಗಂಡನನ್ನು ತೊರೆದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಬನಶಂಕರಿ 3ನೇ ಹಂತದ ನಿವಾಸಿ 23 ವರ್ಷದ ಮಹಿಳೆ ನೀಡಿದ ದೂರಿನ ಮೇರೆಗೆ ಪರಮೇಶ್ (30) ವಿರುದ್ಧ ಬಸವನಗುಡಿ ಮಹಿಳಾ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಏನಿದು ಪ್ರಕರಣ?: ಖಾಸಗಿ ಕಂಪನಿಯ ಇಂಜಿನಿಯರ್ ಆಗಿರುವ ಪರಮೇಶ್, ಕಳೆದ ವರ್ಷ ದೂರುದಾರ ಮಹಿಳೆಯನ್ನು ವಿವಾಹವಾಗಿದ್ದರು. ಇತ್ತೀಚೆಗೆ ಪರಮೇಶ್ ಮನೆಗೆ ಸಾಕು ನಾಯಿಯೊಂದನ್ನು ತಂದಿದ್ದರು. ಬಳಿಕ ಪತ್ನಿಗೆ ಅಲರ್ಜಿಗಿದ್ದು, ವೈದ್ಯರ ಬಳಿ ತೋರಿಸಿದಾಗ ಮನೆಯಲ್ಲಿ ಅಲ್ಲಲ್ಲಿ ಬಿದ್ದ ನಾಯಿಯ ರೋಮ ಮೈಗೆ ತಾಗಿ ಅಲರ್ಜಿ ಆಗಿರುವ ಸಾಧ್ಯತೆಗಳಿವೆ ಎಂದಿದ್ದರು. ಈ ವಿಚಾರವನ್ನು ಪತಿಯ ಗಮನಕ್ಕೆ ತಂದರೂ ನಾಯಿ ಸಾಕುವುದನ್ನು ಮುಂದುವರಿಸಿದ್ದರು. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ 50 ಲಕ್ಷ ರೂ. ಹಾಗೂ ಒಡವೆಗಳನ್ನು ನೀಡಿದರೆ ಹೊಸ ಮನೆ ಖರೀದಿಸಬಹುದು. ಹೊಸ ಮನೆಯಲ್ಲಿ ನಾಯಿಗೆ ಬೇರೆ ವ್ಯವಸ್ಥೆ ಮಾಡುವುದಾಗಿ ಹೇಳಿದ ಪರಮೇಶ್, ಪತ್ನಿಯನ್ನು ಆಕೆಯ ತವರು ಮನೆಯಲ್ಲೇ ಬಿಟ್ಟು ಹೋಗಿದ್ದರು.
ಹಿರಿಯರು ಮಾತುಕತೆ ನಡೆಸಿ ಪರಮೇಶ್ ಜತೆಗೆ ಪತ್ನಿಯನ್ನು ವಾಪಸ್ ಮನೆಗೆ ಕಳುಹಿಸಿದ್ದರು. ಆದರೆ, ಮತ್ತೆ ಆಕೆಗೆ ಅಲರ್ಜಿ ಉಂಟಾಗಿತ್ತು. ಇಷ್ಟಾದರೂ ಪರಮೇಶ್ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ದಿರಲಿಲ್ಲ. ಕೊನೆಗೆ ಆಕೆಯ ತವರು ಮನೆಯವರೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಕೊನೆಗೆ ಪರಮೇಶ್ರ ಈ ವರ್ತನೆಯಿಂದ ಬೇಸತ್ತ ಆಕೆ ಗಂಡನನ್ನು ತೊರೆದು ತವರು ಮನೆಗೆ ಬಂದು ಪೊಲೀಸರಿಗೆ ದೂರು ನೀಡಿದ್ದಾಳೆ. ಅಲ್ಲದೆ, ಪರಮೇಶ್ ಹಾಗೂ ಆತನ ಪಾಲಕರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.