ಜಿಲ್ಲೆ

ವೃತ್ತಿ ಗೌರವಕ್ಕೆ ಚ್ಯುತಿ ಬರದಂತೆ ನಡೆದುಕೊಳ್ಳಿ

Dharwada - Santosh Vaidya

ಹುಬ್ಬಳ್ಳಿ: ಒಬ್ಬ ಶಿಕ್ಷಕ ತಪ್ಪು ಮಾಡಿದರೆ ಶಿಕ್ಷಣ ಸಮುದಾಯಕ್ಕೆ ಕಳಂಕ ಬರುತ್ತದೆ. ಶಿಕ್ಷಕರು ವೃತ್ತಿ ಗೌರವಕ್ಕೆ ಚ್ಯುತಿಯಾಗದಂತೆ ನಡೆದುಕೊಳ್ಳಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ನಗರದ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಹುಬ್ಬಳ್ಳಿ ಗ್ರಾಮೀಣ ಶಿಕ್ಷಕ ದಿನೋತ್ಸವ ಸಮಿತಿ ಮಂಗಳವಾರ ಆಯೋಜಿಸಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕ ವೃತ್ತಿಯನ್ನು ಬದ್ಧತೆ, ಗೌರವದಿಂದ ಮಾಡಿದರೆ ಇದಕ್ಕಿಂತ ಶ್ರೇಷ್ಠವಾದ ಕೆಲಸ ಯಾವುದೂ ಇಲ್ಲ ಎಂದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಉತ್ತಮ ರಾಷ್ಟ್ರ ನಿರ್ಮಾಣ ಮಾಡಲು ಶಿಕ್ಷಕರ ಪಾತ್ರ ಮಹತ್ವದ್ದು. ಸರ್ಕಾರಿ ಶಾಲೆ ವರ್ಸಸ್ ಖಾಸಗಿ ಶಾಲೆ ಎಂಬುದು ಚರ್ಚೆಯಾಗುತ್ತಿದೆ. ಗುಣಮಟ್ಟದ ಶಿಕ್ಷಣ, ಮೂಲಸೌಕರ್ಯಗಳಲ್ಲಿ ಸರ್ಕಾರಿ ಶಾಲೆಗಳು ಹಿಂದೆ ಬೀಳದಂತೆ ನಾವೆಲ್ಲ ಸೇರಿ ಪ್ರಯತ್ನ ಮಾಡೋಣ. ಜಿಲ್ಲೆಯಲ್ಲಿ ಶಿಕ್ಷಕರ ಕೊರತೆಯಾಗದಂತೆ ನೋಡಿಕೊಳ್ಳೊಣ ಎಂದರು.

2023-24ನೇ ಶಾಲಾ ಚಟುವಟಿಕೆ ಹಾಗೂ ಶುಭಾಷಯ ಪತ್ರವನ್ನು ಬಿಡುಗಡೆ ಮಾಡಿದ ಶಾಸಕ ಎನ್.ಎಚ್. ಕೋನರಡ್ಡಿ, ಕನ್ನಡ ಮಾಧ್ಯಮ ಹಾಗೂ ಗ್ರಾಮೀಣ ಶಾಲೆಗಳ ಪರಿಸ್ಥಿತಿಯ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಕರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ, ಸಮವಸ್ತ್ರ, ಎಲ್ಲವೂ ಉಚಿತವಾಗಿರುವಾಗ ಶಿಕ್ಷಕರು ಹೆಚ್ಚು ಬದ್ಧತೆಯಿಂದ ಕೆಲಸ ನಿರ್ವಹಿಸಬೇಕು ಎಂದು ಹೇಳಿದರು.

ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಮಹಾದೇವಪ್ಪ ನರಗುಂದ, ಹು-ಧಾ ಬಂಟರ ಸಂಘದ ಸುಗ್ಗಿ ಸುಧಾಕರ ಶೆಟ್ಟಿ, ಶಿಕ್ಷಣ ಇಲಾಖೆಯ ನಿರ್ದೇಶಕ ಡಾ. ಬಿ.ಕೆ.ಎಸ್. ವರ್ಧನ್, ಡಿಡಿಪಿಐ ಎಸ್.ಎಸ್. ಕೆಳದಿಮಠ, ವೈ.ಎಚ್. ಬಣವಿ, ಗಂಗಾಧರ ಹುಬ್ಬಳ್ಳಿ, ಜಿ.ಕೆ. ಉಳ್ಳಟ್ಟಿ, ಆಶಾ ಮುನವಳ್ಳಿ, ಪ್ರೀತಿ ಅಗರವಾಲ್ ಇತರರು ಇದ್ದರು.

ರೇವಡಿಹಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ಉಣಕಲ್ ಎಲ್​ಪಿಎಸ್ ವಿದ್ಯಾರ್ಥಿಗಳು ರೈತ ಗೀತೆ ಹಾಡಿದರು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಂಗಮೇಶ ಬಂಗಾರಿಮಠ ಸ್ವಾಗತಿಸಿದರು. ಬಿಇಒ ಉಮೇಶ ಬಮ್ಮಕ್ಕನವರ ಪ್ರಾಸ್ತಾವಿಕ ಮಾತನಾಡಿದರು.