ಶಾಸಕ ಎ. ಮಂಜು 
ಜಿಲ್ಲೆ

ಹಳ್ಳಿಗುಗ್ಗು ಪದದ ಅರ್ಥ ಸಚಿವ ಪ್ರಿಯಾಂಕ್ ಖರ್ಗೆಗೆ ತಿಳಿದಿದೆಯೇ: ಶಾಸಕ ಎ. ಮಂಜು ಪ್ರಶ್ನೆ

ಮೈಸೂರು: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ‘ಹಳ್ಳಿ ಗುಗ್ಗು’ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿರುವುದು ಹಾಸ್ಯಾಸ್ಪದ ಎಂದು ಶಾಸಕ ಎ.ಮಂಜು ಹೇಳಿದರು.

ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಹಾತ್ಮ ಗಾಂಧಿ, ದೇವೇಗೌಡ, ದೇವರಾಜ ಅರಸು, ವೀರೇಂದ್ರ ಪಾಟೀಲ್ ಸೇರಿ ಎಲ್ಲ ಮಹನೀಯರು ಹಳ್ಳಿಗಳಿಂದ ಬಂದವರು. ಪದದ ಅರ್ಥ ಗೊತ್ತಿಲ್ಲದೆ ಪ್ರಚಾರದ ಹುಚ್ಚಿಗೆ ಮಾತನಾಡಬಾರದು. ಅವರ ಹೇಳಿಕೆ ನಮಗೆ ವರದಾನ ಆಗಲಿದೆ. 2028ಕ್ಕೆ ಜನರು ಎಲ್ಲದಕ್ಕೂ ಉತ್ತರ ಕೊಡ್ತಾರೆ ಎಂಬ ಭರವಸೆ ಇದೆ ಎಂದರು.

ಪ್ರಿಯಾಂಕ್ ಖರ್ಗೆ ಅವರ ತಂದೆ ಮಲ್ಲಿಕಾರ್ಜುನ ಖರ್ಗೆ ಸಹ ಹಳ್ಳಿಯಿಂದಲೇ ಬಂದವರು. ಕುಮಾರಸ್ವಾಮಿ ಅವರನ್ನು ಟೀಕಿಸಿರು ವುದಕ್ಕೆ ಸಂಬಂಧಿಸಿದಂತೆ ಕ್ಷಮೆ ಕೇಳಬೇಕು ಎಂದು ನಾನು ಪ್ರಿಯಾಂಕ್ ಖರ್ಗೆ ಅವರನ್ನು ಒತ್ತಾಯಿಸುವುದಿಲ್ಲ. ಆದರೆ, ‘ಹಳ್ಳಿ ಗುಗ್ಗು’ ಎಂಬ ಪದದ ಅರ್ಥ ಏನು ಎಂಬುದನ್ನು ಅವರನ್ನು ಕೇಳಲು ಬಯಸುತ್ತೇನೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ತೊಲಗಿಸಬೇಕು ಅಂತ ಪ್ರಿಯಾಂಕ್ ಖರ್ಗೆ ತೀರ್ಮಾನ ಮಾಡಿದ್ದಾರೆ. ಈ ಕಾರಣಕ್ಕೆ ಇಂತಹ ಭಾಷಾ ಪ್ರಯೋಗವನ್ನು ಅವರು ಮಾಡುತ್ತಿದ್ದಾರೆ. ಅವರ ಭಾಷೆಯೇ ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ. ಅವರ ಪದ ಬಳಕೆ ಹಳ್ಳಿ ಜನರಿಗೆ ಅವಮಾನ ಮಾಡಿದಂತೆ. ಹಳ್ಳಿ ಜನರು ಸಮಯ ಬಂದಾಗ ಪಾಠ ಕಲಿಸುತ್ತಾರೆ. ಪ್ರಿಯಾಂಖ್ ಖರ್ಗೆ ಕುಮಾರಸ್ವಾಮಿ ಅವರನ್ನ ಡಿಗ್ರೇಡ್ ಮಾಡಲಿಲ್ಲ, ಹಳ್ಳಿಯ ಜನರನ್ನು ಡಿಗ್ರೇಡ್ ಮಾಡಿದ್ದಾರೆ. ಹಳ್ಳಿಗಳಿಗೆ ಮತ ಕೇಳಲು ಹೋದಾಗ ಜನರು ಗುಗ್ಗು ಯಾರು ತೋರಿಸುತ್ತಾರೆ ಎಂದು ಹೇಳಿದರು.

ಕಷ್ಟಪಟ್ಟು ಸಚಿವ ಆಗಿದ್ದರೆ ಅವರಿಗೆ ಎಲ್ಲವೂ ಗೊತ್ತಿರೋದು, ಸುಲಭವಾಗಿ ಅಧಿಕಾರ ಸಿಕ್ಕಾಗ ಈ ರೀತಿ ಆಗುತ್ತದೆ. ಮಲ್ಲಿಕಾರ್ಜುನ ಖರ್ಗೆ ರಾಜಕೀಯವಾಗಿ ನನ್ನನ್ನು ಬೆಳೆಸಿದ್ದಾರೆ, ಅದಕ್ಕೆ ನನಗೆ ಕೃತಜ್ಞತೆ ಇದೆ. ಆದರೆ, ನಿಮ್ಮ ಮಗನಿಗೆ ಸ್ವಲ್ಪ ಬುದ್ಧಿ ಹೇಳಿ ಅಂತ ನಾನು ಅವರಿಗೆ ಮನವಿ ಮಾಡುತ್ತೇನೆ ಎಂದರು.