ಜಿಲ್ಲೆ

ರಾತ್ರಿ ನಾಟಕಗಳಿಗೂ ಸಂಚಕಾರ?; ಲೌಡ್​ ಸ್ಪೀಕರ್​ ವಿವಾದದ ಮತ್ತೊಂದು ಮಗ್ಗಲು..

ಬೆಂಗಳೂರು: ರಾಜ್ಯದಲ್ಲಿ ಹಿಜಾಬ್​-ಹಲಾಲ್​ ಬಳಿಕ ಉಂಟಾಗಿರುವ ಲೌಡ್​ಸ್ಪೀಕರ್​ ವಿವಾದ ಮತ್ತೊಂದು ಕೋಮುಸಂಘರ್ಷಕಕ್ಕೆ ಎಡೆ ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ, ಅದು ಮುಂದೆ ರಾತ್ರಿ ನಾಟಕಗಳಿಗೂ ಸಂಚಕಾರ ತರಲಿವೆಯೇ ಎಂಬ ಆತಂಕ ಮೂಡಿಸಿದೆ.

ಧಾರ್ಮಿಕ ಕೇಂದ್ರಗಳಲ್ಲಿ ಧ್ವನಿವರ್ಧಕ ಹಾಕುವ ಕುರಿತ ಉಂಟಾಗಿರುವ ವಿವಾದದ ವಿಚಾರವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್​ಪಿ ವಂಶಿಕೃಷ್ಣ, ಇದುವರೆಗೆ ಆ ಸಂಬಂಧ ಕೈಗೊಂಡಿರುವ ಕ್ರಮಗಳ ಬಗ್ಗೆ ಇಂದು ಜಿಲ್ಲಾಡಳಿತ ಭವನದಲ್ಲಿ ವಿವರ ನೀಡಿದರು.

ಎಲ್ಲೆಲ್ಲಿ ಲೌಡ್ ಸ್ಪೀಕರ್ ಬಳಕೆ ಮಾಡುತ್ತಾರೋ ಅವರಿಗೆಲ್ಲ ಈಗಾಗಲೇ ನೋಟಿಸ್ ನೀಡಲಾಗಿದೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ 156 ಮಸೀದಿಗಳು, 171 ದೇವಸ್ಥಾನಗಳು, 41 ಚರ್ಚ್​ಗಳು ಸೇರಿ ಒಟ್ಟು 374 ನೋಟಿಸ್ ನೀಡಲಾಗಿದೆ, ಜತೆಗೆ 14 ಬಾರ್​ಗಳು ಮತ್ತು ಒಂದು ರೆಸ್ಟೋರೆಂಟ್​ಗೂ ನೀಡಲಾಗಿದೆ ಎಂದು ಅವರು ತಿಳಿಸಿದರು.

ಧ್ವನಿವರ್ಧಕದ ಸಂಬಂಧ ಹೈಕೋರ್ಟ್ ನಿರ್ದೇಶನವಿದೆ. ಹೀಗಾಗಿ ನಿಯಮ ಮೀರುವವರ ವಿರುದ್ಧ ಕಾನೂನುಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ ಅವರು ಹಳ್ಳಿಗಳಲ್ಲಿ ರಾತ್ರಿ ಹೊತ್ತು ನಡೆಯುವ ನಾಟಕಗಳ ಕುರಿತ ಪ್ರಶ್ನೆಗೂ ಪ್ರತಿಕ್ರಿಯಿಸಿದರು.

ರಾತ್ರಿ 10ರಿಂದ ಬೆಳಗ್ಗೆ 6 ಗಂಟೆಯವರೆಗೆ ಯಾವುದೇ ರೀತಿಯ ಶಬ್ದ ಬಳಕೆ ಮಾಡಬಾರದು ಎಂದು ನಿಯಮವಿದೆ. ಹೀಗಾಗಿ ಅದರ ಬಗ್ಗೆ ಕೂಡ ಚರ್ಚೆ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದ್ದು, ಇನ್ನು ರಾತ್ರಿಯ ಸಂದರ್ಭದಲ್ಲಿ ನಾಟಕ ಕೂಡ ಆಡಲು ಅವಕಾಶ ಇರುತ್ತದೋ ಇಲ್ಲವೋ ಎಂಬ ಆತಂಕ ಮೂಡಿದೆ.