ಜಿಲ್ಲೆ

ದೊಡ್ಡೇರಿ ಕೆರೆ ರಸ್ತೆ ಕಾಮಗಾರಿ ಶುರು

ಹರ್ಷ ನ.ಪುರೋಹಿತ

ಪರಶುರಾಮಪುರ: ದೊಡ್ಡೇರಿ ಗ್ರಾಮದ ಕೆರೆ ರಸ್ತೆಯಲ್ಲಿನ ಗುಂಡಿ ಮುಚ್ಚುವ ಕಾರ್ಯದತ್ತ ಪಿಡಬ್ಲುೃಡಿ ಗಮನ ಹರಿಸಿದ್ದು, ಕಾಮಗಾರಿ ಭರದಿಂದ ಸಾಗುತ್ತಿದೆ. ಇಲಾಖೆ ಕಾರ್ಯಕ್ಕೆ ಗ್ರಾಮದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಚಳ್ಳಕೆರೆ-ಪಾವಗಡ ಮಾರ್ಗದಲ್ಲಿನ ದೊಡ್ಡೇರಿ ಗ್ರಾಮದ ಕೆರೆಗೆ ಮಿನಿ ಬ್ರಿಡ್ಜ್ ನಿರ್ಮಿಸುವ ಸಂದರ್ಭ, ಗುತ್ತಿಗೆದಾರರು ರಸ್ತೆಗೆ ಕಾಂಕ್ರೀಟ್ ಬದಲು ಮಣ್ಣು ಸುರಿದಿದ್ದರು. ಮಳೆ ಬಂದಿದ್ದರಿಂದ ಗುಂಡಿಗಳಾಗಿ ಸಂಚಾರ ದುಸ್ತರವಾಗಿತ್ತು.

ಈ ಬಗ್ಗೆ ದೊಡ್ಡೇರಿ ಗ್ರಾಮದ ರಸ್ತೆ ಗುಂಡಿಮುಕ್ತ ಯಾವಾಗ? ಎಂಬ ಶೀರ್ಷಿಕೆಯಡಿ ವಿಜಯವಾಣಿ ಆ.10ರಂದು ವರದಿ ಮಾಡಿತ್ತು. ತಕ್ಷಣ ಸ್ಪಂದಿಸಿದ ಚಳ್ಳಕೆರೆ ತಾಲೂಕು ಪಿಡಬ್ಲುೃಡಿ ಇಂಜಿನಿಯರ್ ಹಾಗೂ ಅಧಿಕಾರಿಗಳು ಕಾಮಗಾರಿ ಆರಂಭಿಸಿದ್ದಾರೆ.

ಕೆಲ ತಾಂತ್ರಿಕ ಕಾರಣಗಳಿಂದ ರಸ್ತೆಗೆ ಕಾಂಕ್ರೀಟ್ ಹಾಕಿರಲಿಲ್ಲ. ಮಳೆಯಿಂದಾಗಿ ರಸ್ತೆ ಆಗಿದ್ದ ತಗ್ಗು-ಗುಂಡಿಗಳನ್ನು ಸೀಮೆಂಟ್ ಹಾಕಿ ಮುಚ್ಚುವ ಕಾರ್ಯ ಪ್ರಗತಿಯಲ್ಲಿದೆ. ಶೀಘ್ರದಲ್ಲೇ ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಎಇಇ ವಿಜಯಭಾಸ್ಕರ ತಿಳಿಸಿದ್ದಾರೆ.