ಜಿಲ್ಲೆ

ದೊಡ್ಡಣ ಶೆಟ್ಟಿ ಕೆರೆಗೆ ಕಾಯಕಲ್ಪ

Dakshina Kannada

ರತ್ನಾಕರ ಎಸ್.ಸುಬ್ರಹ್ಮಣ್ಯ

ಜಲಮೂಲಗಳ ಅಭಿವೃದ್ಧಿ ಮತ್ತು ಅಂತರ್ಜಲ ಮಟ್ಟ ಹೆಚ್ಚಿಸುವ ಸಲುವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಮ್ಮೂರು ನಮ್ಮ ಕೆರೆ ಯೋಜನೆಯಡಿ ಕೊಲ್ಲಮೊಗ್ರ ಶಿರೂರು ಚಾಂತಾಳ ಭಾಗದ ಮಲ್ಲಾಜೆ ದೊಡ್ಡಣ್ಣ ಶೆಟ್ಟಿ ಕೆರೆ ಅಭಿವೃದ್ಧಿಗೊಳ್ಳುತ್ತಿದೆ.

ಕುರುಹೇ ಇಲ್ಲದಂತಿದ್ದ ದೊಡ್ಡಣ್ಣ ಶೆಟ್ಟಿ ಕೆರೆ ಈಗ ಕೆರೆಯ ರೂಪ ಪಡೆದುಕೊಂಡಿದೆ. ಕೊಲ್ಲಮೊಗ್ರದ ಮಲ್ಲಾಜೆ ಎಂಬಲ್ಲಿರುವ ಈ ಕೆರೆ 400 ವರ್ಷಗಳ ಹಿಂದಿನದ್ದು. ಜೈನರಸರ ಕಾಲದ ಯಜಮಾನ ದೊಡ್ಡಣ್ಣ ಶೆಟ್ಟಿ ಇದನ್ನು ನಿರ್ಮಿಸಿದ್ದರು. ದೊಡ್ಡಣ್ಣ ಶೆಟ್ಟಿ ಕೆರೆ ಹಿಂದಿನ ಕಾಲದಲ್ಲಿ ಊರಿಗೆ ನೀರುಣಿಸುವ ಕೆರೆಯಾಗಿತ್ತು. ಒಮ್ಮೆ ಏಳು ಜೊತೆ ಎತ್ತುಗಳು ಮತ್ತು ಒಬ್ಬ ವ್ಯಕ್ತಿ ನೀರಿಗಿಳಿದವರು ಮತ್ತೆ ಮೇಲೆ ಬರಲಿಲ್ಲ ಎಂಬ ಕತೆಯಿದೆ. ಅಷ್ಟು ಜಲಸಮೃದ್ಧಿ ಹೊಂದಿತ್ತು ಎಂಬ ಪ್ರತೀತಿ.

ಮಾಧವ ಚಾಂತಾಳ ಎಂಬುವರು ದೊಡ್ಡಣ್ಣ ಶೆಟ್ಟಿ ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಸ್ಥಳೀಯ ಸಂಘ ಸಂಸ್ಥೆಗಳು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ಸೇರಿ ಕೆರೆ ಅಭಿವೃದ್ಧಿ ಕೆಲಸದಲ್ಲಿ ಕೈಜೋಡಿಸಿದ್ದಾರೆ. ಗ್ರಾಮಾಭಿವೃದ್ಧಿ ಯೋಜನೆಯ ಗುಂಪು ಲೆಕ್ಕಪರಿಶೋಧಕರಾದ ಉಮೇಶ್, ಸುಬ್ರಹ್ಮಣ್ಯ ವಲಯ ಮೇಲ್ವಿಚಾರಕ ಸೀತಾರಾಮ ಕೆ. ಉಸ್ತುವಾರಿ ನೋಡಿಕೊಳ್ಳುತಿದ್ದಾರೆ. ಕಾರ್ಯಕರ್ತೆಯರಾದ ಸಾವಿತ್ರಿ, ಶೋಭಾ ಚಾಳೆಪ್ಪಾಡಿ ಸಹಕರಿಸುತಿದ್ದಾರೆ.

ಹಿಟಾಚಿ, ಟಿಪ್ಪರ್, ಟ್ರಾಕ್ಟರ್ ಬಳಸಿ ಸುಮಾರು 300 ಲೋಡು ಫಲವತ್ತಾದ ಮಣ್ಣನ್ನು ಕೆರೆಯಿಂದ ತೆಗೆದು ಸ್ಥಳೀಯ ರೈತರು ಕೃಷಿ ಭೂಮಿಗೆ ಉಪಯೋಗಿಸಿದ್ದಾರೆ. ಸುಮಾರು 3000 ಸಾವಿರ ಲೋಡು ಮಣ್ಣು ತೆಗೆಯಲಾಗಿದೆ. ಈ ಕೆರೆಯಿಂದ ಸುತ್ತಲಿನ ಸುಮಾರು 200 ಮನೆಗಳಿಗೆ ಪ್ರಯೋಜನವಾಗಲಿದ್ದು, ಊರಿನಲ್ಲಿ ಅಂತರ್ಜಲ ಮಟ್ಟವೂ ಅಭಿವೃದ್ಧಿಯಾಗಲಿದೆ.

45 ಸೆಂಟ್ಸ್‌ನಲ್ಲಿ ವ್ಯಾಪ್ತಿ: 45 ಸೆಂಟ್ಸ್ ಜಾಗದಲ್ಲಿ ಈ ಕೆರೆ ಇದೆ. 50 ಮೀಟರ್ ಅಗಲ ಮತ್ತು 50 ಮೀಟರ್ ಉದ್ದ, 15 ಅಡಿ ಎತ್ತರ ಇರಲಿದೆ. ಕೆರೆಯ ಸುತ್ತ 2 ಅಡಿ ಅಗಲದ ಕಲ್ಲಿನ ಕಟ್ಟೆ ನಿರ್ಮಾಣಗೊಳ್ಳಲಿದೆ. 5 ಲಕ್ಷ ರೂ. ಗ್ರಾಮಾಭಿವೃದ್ಧಿಯಿಂದ ವ್ಯಯಿಸಲಾಗುತ್ತಿದೆ. ಬೇಲಿ, ಕಟ್ಟೆ, ಕುಳಿತುಕೊಳ್ಳಲು ಬೆಂಚ್ ನಿರ್ಮಿಸಲಾಗುವುದು.

ಸುಮಾರು 400 ವರ್ಷಗಳ ಹಿಂದಿನ ಬಲ್ಲಾಳರ ಕಾಲದ ಕೆರೆ. ಗ್ರಾಮಸಭೆಯಲ್ಲಿ ಅಭಿವೃದ್ಧಿಗೆ ನಿರ್ಣಯ ಮಾಡಿದ್ದರೂ ಪ್ರಯೋಜನ ಆಗಿರಲಿಲ್ಲ. ಈಗ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೆರೆ ಅಭಿವೃದ್ಧಿಯಾಗುತ್ತಿದೆ. ಈ ಭಾಗದ ಕೃಷಿಗೆ ಮತ್ತು ಅಂತರ್ಜಲ ವೃದ್ಧಿಗೆ ಇದು ಸಹಕಾರಿ. ಮಾಧವ ಚಾಂತಾಳ ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸುಳ್ಯ ತಾಲೂಕಿನ ನಾವು ಕೈಗೆತ್ತಿಕೊಂಡ ಮೊದಲ ಯೋಜನೆ ದೊಡ್ಡಣ್ಣ ಶೆಟ್ಟಿ ಕೆರೆ. ಎರಡು ವರ್ಷಗಳ ಹಿಂದೆ ಅಭಿವೃದ್ಧಿಗಾಗಿ ಆಯ್ಕೆ ಆಗಿತ್ತು. ಆದರೆ ದಾಖಲೆಗಳು ಸರಿ ಇಲ್ಲದ ಕಾರಣ ಎರಡು ವರ್ಷ ತಡವಾಯಿತು. ಈ ಹಳೆಯದಾದ ಕೆರೆಯನ್ನು ನಮ್ಮೂರು ನಮ್ಮ ಕೆರೆ ಯೋಜನೆ ಮುಖಾಂತರ ಅಭಿವೃದ್ಧಿ ಮಾಡಲಾಗುತ್ತಿದೆ. ಸಂತೋಷ್ ಕುಮಾರ್ ರೈ ಧರ್ಮಸ್ಥಳ ಯೋಜನೆ ಯೋಜನಾಧಿಕಾರಿ ಸುಳ್ಯ ಸುಳ್ಯ ತಾಲೂಕಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖಾಂತರ ಅಭಿವೃದ್ಧಿ ಹೊಂದುತ್ತಿರುವ ಪ್ರಥಮ ಕೆರೆ. ಜನಪ್ರತಿನಿಧಿಗಳು, ಗ್ರಾಮಸ್ಥರು, ಕೆರೆ ಅಭಿವೃದ್ಧಿ ಸಮಿತಿಯವರು ಪೂರ್ಣ ಸಹಕಾರ ನೀಡಿದ್ದಾರೆ. ಇದರಿಂದ ಗ್ರಾಮೀಣ ಭಾಗದ ನೀರಿನ ಮಟ್ಟ ಹೆಚ್ಚಲಿದೆ. ಸೀತಾರಾಮ ವಲಯ ಮೇಲ್ವಿಚಾರಕರು