ಜಿಲ್ಲೆ

ನಾಳೆ ದೊಡ್ಡಮ್ಮ ತಾಯಿ ರಥೋತ್ಸವ

ಲಲಾಟಾಕ್ಷ ಎಸ್

ರಾವಂದೂರು: ಪಿರಿಯಾಪಟ್ಟಣ ತಾಲೂಕು ರಾವಂದೂರು ಗ್ರಾಮದ ಗ್ರಾಮದೇವತೆ ಆದಿಶಕ್ತಿ ದೊಡ್ಡಮ್ಮ ತಾಯಿ ರಥೋತ್ಸವ ಮೇ 3 ರಂದು ನಡೆಯಲಿದೆ.


ಮೇ 4ರಂದು ಚಂದ್ರಮಂಡಲೋತ್ಸವ ನೆರವೇರಲಿದೆ. ಒಂದು ವಾರದಿಂದ ವಿವಿಧ ಧಾರ್ಮಿಕ ಕಾರ್ಯಗಳು ನಡೆದಿದ್ದು ಬುಧವಾರ ರಾತ್ರಿ ಸಾಲಿಗ್ರಾಮ ತಾಲೂಕು ಚುಂಚನಕಟ್ಟೆ ಕಾವೇರಿ ನದಿಯ ದಡದಲ್ಲಿ ಉತ್ಸವಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಅಲ್ಲಿಂದ ಕಾಲ್ನಡಿಗೆ ಮುಖಾಂತರ ವಿವಿಧ ಗ್ರಾಮಗಳಲ್ಲಿ ಪೂಜೆ ಸಲ್ಲಿಸುವ ಮೂಲಕ ಗುರುವಾರ ಗ್ರಾಮಕ್ಕೆ ಆಗಮಿಸಲಿದೆ. ಆಗಮಿಸಿದ ಉತ್ಸವ ಮೂರ್ತಿಯನ್ನು ದೇವಾಲಯದಲ್ಲಿ ಇಡಲಾಗುತ್ತದೆ.


ಮೇ 3ರಂದು ಬೆಳಗ್ಗೆ ಉತ್ಸವಮೂರ್ತಿಯನ್ನು ಎಸ್.ಕೊಪ್ಪಲು ಗ್ರಾಮದ ಮುದ್ದಪ್ಪ ಅವರ ತೋಟಕ್ಕೆ ಕೊಂಡೊಯ್ದು ಅಲ್ಲಿ ವಿಶೇಷ ಪೂಜೆ ಸಲ್ಲಿಸಿ ಉತ್ಸವ ಮೂರ್ತಿಯನ್ನು ಮೆರವಣಿಗೆಯ ಮೂಲಕ ರಾವಂದೂರು ಗ್ರಾಮಕ್ಕೆ ತಂದು ಹೂವಿನ ಅಲಂಕೃತ ರಥದ ಮೇಲೆ ಕುಳ್ಳಿರಿಸಿ ಪೂಜೆ ಸಲ್ಲಿಸಿದ ನಂತರ ರಥೋತ್ಸವವು ಜರುಗಲಿದೆ. ರಾತ್ರಿ ದೊಡ್ಡಮ್ಮ ತಾಯಿ ಉತ್ಸವ ಮೂರ್ತಿಯನ್ನು ಚಂದ್ರಮಂಡಲಾಕೃತಿಯ ಮಂಟಪದಲ್ಲಿ ಕುಳ್ಳಿರಿಸಿ ರಾವಂದೂರು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುವುದು. ಶನಿವಾರ ಬೆಳಗ್ಗೆ ಉತ್ಸವ ಮೂರ್ತಿಯ ಉಯ್ಯಲೆಯೊಂದಿಗೆ ಜಾತ್ರೆ ಮುಕ್ತಾಯಗೊಳ್ಳುತ್ತದೆ.