ಜಿಲ್ಲೆ

ದೊಡ್ಡಕೆರೆ ತುಂಬಲಿ ರೈತರ ಬಾಳು ಬೆಳಗಲಿ

ಗುತ್ತಲ: ಗಾಜನೂರ ಜಲಾಶಯದಿಂದ ತುಂಗಾ ಮೇಲ್ದಂಡೆ ಕಾಲುವೆಗೆ ಬಿಟ್ಟಿರುವ ನೀರಿನಿಂದ ಪಟ್ಟಣದ ದೊಡ್ಡ ಕೆರೆ ತುಂಬಿಸುವ ನಿಟ್ಟಿನಲ್ಲಿ ಸ್ಥಳೀಯ ಪಟ್ಟಣ ಪಂಚಾಯಿತಿ ಕಾರ್ಯೋನ್ಮುಖವಾಗಿದೆ.

288 ಎಕರೆ ವಿಸ್ತಾರದ ಕೆರೆಯಲ್ಲಿ ನೂರಾರು ವರ್ಷಗಳಿಂದ ಅಪಾರ ಪ್ರಮಾಣ ಹೂಳು ತುಂಬಿದೆ. ಹೀಗಾಗಿ, ಕೆರೆ ಬೇಗನೆ ತುಂಬುತ್ತದೆ. ಅಷ್ಟೇ ಬೇಗ ಖಾಲಿಯಾಗುತ್ತದೆ!

2017ರಲ್ಲಿ ತುಂಗಾ ಮೇಲ್ದಂಡೆ ಕಾಲುವೆಯ ಹೆಚ್ಚುವರಿ ನೀರು ಕೆರೆಗೆ ಬಂದ ಕಾರಣ 25 ವರ್ಷಗಳ ನಂತರ ಕೆರೆ ಕೋಡಿ ಬಿದ್ದು 2023ರವರೆಗೂ ಕೆರೆಯಲ್ಲಿ ವರ್ಷದ ಎಲ್ಲ ದಿನಗಳಲ್ಲೂ ನೀರು ತುಂಬಿಕೊಂಡಿತ್ತು. ಕಳೆದ ವರ್ಷ ಮಳೆ ನೀರು ಹಾಗೂ ತುಂಗಾ ಮೇಲ್ದಂಡೆ ಕಾಲುವೆಯ ಹೆಚ್ಚುವರಿ ನೀರನ್ನು ಹರಿಸಿದ್ದರೂ ಕೆರೆ ಪೂರ್ಣ ತುಂಬಿರಲಿಲ್ಲ. ಬೇಸಿಗೆಯಲ್ಲಿ ಕೆರೆ ಖಾಲಿ ಆಗಿದ್ದರಿಂದ 6 ವರ್ಷಗಳ ನಂತರ ಕೆರೆ ಸಂಪೂರ್ಣ ಬತ್ತಿ ಹೋಗಿದೆ. ಪಟ್ಟಣದ ಐತಿಹಾಸಿಕ ಹಾಗೂ ವಿದೇಶಿ ಹಕ್ಕಿಗಳ ಆಶ್ರಯ ತಾಣದ ಖ್ಯಾತಿಯ ದೊಡ್ಡ ಕೆರೆ ಖಾಲಿಯಾದ ಪರಿಣಾಮ ಗುತ್ತಲ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಕುಸಿತ ಕಂಡು ನೀರಿನ ಸಮಸ್ಯೆ ಉಲ್ಬಣಿಸಿದೆ.

ಈ ಮೊದಲು ದೊಡ್ಡ ಕೆರೆಗೆ ಕನವಳ್ಳಿ, ಕೂರಗುಂದ, ಭರಡಿ ಗ್ರಾಮದ ಭಾಗಗಳಿಂದ ಮಳೆ ನೀರು ಬರುತಿತ್ತು. ಆದರೆ, ಪ್ರಸ್ತುತ ಕೆರೆಗೆ ಈ ಭಾಗಗಳಿಂದ ನೀರು ಬರುತ್ತಿಲ್ಲ. ರುದ್ರಪ್ಪ ಲಮಾಣಿ ಅವರು ಈ ಮೊದಲು ಮಂತ್ರಿಯಾಗಿದ್ದ ವೇಳೆ ತುಂಗಾ ಮೇಲ್ದಂಡೆ ಯೋಜನೆಯ ಹೆಚ್ಚುವರಿ ನೀರು ಕೆರೆಗೆ ಹರಿಸುವ ಯೋಜನೆ ಅನುಷ್ಠಾನಗೊಳಿಸಿದರು. ಪರಿಣಾಮ ಗಾಜನೂರ ಡ್ಯಾಂನಿಂದ ಬರುವ ನೀರು ತುಂಗಾ ಮೇಲ್ದಂಡೆ ಕಾಲುವೆಯ 221 ಕಿ.ಮೀ. ಬಳಿ ನಿರ್ಮಿಸಿದ ಸಣ್ಣ ಕಾಲುವೆ ಮೂಲಕ ಕೆರೆಗೆ ಹರಿಯುವಂತಾಗಿದೆ.

ಕೆರೆಗೆ ನೀರು ಹರಿದು ಬರುವ ಕಾಲುವೆಯಲ್ಲಿ ಕಳೆದ ಎರಡು ವರ್ಷಗಳಿಂದ ಗಿಡಗಂಟಿ ಬೆಳೆದು ಹಾಗೂ ಕಲ್ಲು ಬಿದ್ದು ಹೂಳು ತುಂಬಿಕೊಂಡಿದೆ. ಜು. 3ರಂದು ಗಾಜನೂರ ಜಲಾಶಯದಿಂದ ತುಂಗಾ ಮೇಲ್ದಂಡೆ ಕಾಲುವೆಗೆ ನೀರು ಬಿಡುಗಡೆ ಮಾಡಲಾಗಿದ್ದು, ಜು. 10ರ ವೇಳೆಗೆ ಗುತ್ತಲ ಭಾಗಕ್ಕೆ ತಲುಪಲಿದೆ. ಈ ಹಿನ್ನೆಲೆಯಲ್ಲಿ ಪಪಂ ಕಾಲುವೆ ದುರಸ್ತಿ ಮಾಡಿಸುವ ಕಾರ್ಯದಲ್ಲಿ ನಿರತವಾಗಿದೆ. ಶನಿವಾರದಿಂದ ಕಾಲುವೆ ದುರಸ್ತಿ ಹಾಗೂ ಸ್ವಚ್ಛತೆ ಕೆಲಸ ಭರದಿಂದ ಸಾಗಿದೆ.
ಕೆರೆ ಕೋಡಿ ಬಿದ್ದ ನಂತರ ಅದರ ನೀರು ರೈತರ ಜಮೀನುಗಳಿಗೆ ನುಗ್ಗುವ ಸಾಧ್ಯತೆ ಅಲ್ಲಗಳಿಯುವಂತಿಲ್ಲ. ಸಣ್ಣ ನೀರಾವರಿ ಯೋಜನೆಯ ಅಧಿಕಾರಿಗಳು ಕೆರೆ ಕೋಡಿ ಬೀಳುವ ಮೊದಲೇ ಕಾಲುವೆ ದುರಸ್ತಿ ಹಾಗೂ ಸ್ವಚ್ಛಗೊಳಿಸಬೇಕೆಂಬುದು ರೈತರ ಆಗ್ರಹವಾಗಿದೆ. ವಿಜಯನಗರದ ಅರಸರು ಕಟ್ಟಿಸಿದ್ದ ಕೆರೆ, ಈ ವರ್ಷ ಸಂಪೂರ್ಣ ತುಂಬಿ ಜನ-ಜಾನುವಾರಗಳ ದಾಹ ತಣಿಸಿ ರೈತರ ಬಾಳಿಗೆ ಬೆಳಕಾಗಲಿ ಎಂಬುದೇ ಜನರ ಆಶಯವಾಗಿದೆ.

ಗುತ್ತಲದ ಐತಿಹಾಸಿಕ ಕೆರೆಯನ್ನು ಯುಟಿಪಿ ಕಾಲುವೆಯ ಹೆಚ್ಚುವರಿ ನೀರಿನಿಂದ ತುಂಬಿಸಿ ಪಪಂ ಸದಸ್ಯರೊಂದಿಗೆ ಕೆರೆಗೆ ಬಾಗಿನ ಅರ್ಪಿಸಲಾಗುವುದು. ಮುಂದಿನ ದಿನಗಳಲ್ಲಿ ಕೆರೆಯ ನೀರು ರೈತರ ಜಮೀನುಗಳಿಗೆ ಹೋಗಿ ಬೆಳೆ ಹಾನಿಯಾಗದಂತೆ ತಡೆಯಲು ಕೆರೆ ಕೋಡಿ ಕಾಲುವೆ ನಿರ್ಮಾಣ ಹಾಗೂ ದುರಸ್ತಿ ಮಾಡಿಸುವ ನಿಟ್ಟಿನಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸಲು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ರುದ್ರಪ್ಪ ಲಮಾಣಿ, ವಿಧಾನಸಭೆ ಉಪಾಧ್ಯಕ್ಷ ಕೆರೆಯಲ್ಲಿ ನೀರಿಲ್ಲದ ಕಾರಣ ಕೆಲ ತಿಂಗಳಿನಿಂದ ಅಂತರ್ಜಲ ಮಟ್ಟ ಕಡಿಮೆಯಾಗಿದೆ. ತುಂಗಾ ಮೇಲ್ದಂಡೆ ಯೋಜನೆಯಿಂದ ನೀರು ಹರಿದು ಬರುವ ಕೆರೆಗೆ ಕಾಲುವೆಯನ್ನು ಪಪಂ ಸದಸ್ಯರ ಬೇಡಿಕೆ ಹಾಗೂ ಶಾಸಕರ ನಿರ್ದೇಶನದಂತೆ ಶನಿವಾರದಿಂದ ಸ್ವಚ್ಛಗೊಳಿಸುತ್ತಿದ್ದೇವೆ. ಕೆಲವೇ ದಿನಗಳಲ್ಲಿ ಕೆರೆಗೆ ನೀರು ಬರುವ ನಿರೀಕ್ಷೆ ಇದೆ. ಡಾ. ದೇವಾನಂದ ದೊಡ್ಡಮನಿ, ಪಪಂ ಮುಖ್ಯಾಧಿಕಾರಿ, ಗುತ್ತಲ