ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ಹಸುಗೂಸಿನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ ಕುಟುಂಬದವರು ನಗರದ ಖಾಸಗಿ ನಸಿರ್ಂಗ್ ಹೋಮ್ ಬಳಿ ಪ್ರತಿಭಟನೆ ನಡೆಸಿದರು.
ಮಗುವಿನ ಕಡೆಯವರು ಹಾಗೂ ಆಸ್ಪತ್ರೆ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಮಧ್ಯೆ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.
ಏನಿದು ಪ್ರಕರಣ? ಯಲಹಂಕದ ಕೋಗಿಲು ನಿವಾಸಿ ವಿನೋದ್ ಮತ್ತು ಪ್ರಿಯಾಂಕಾ ದಂಪತಿ 3 ದಿನದ ಹಿಂದೆ ದೊಡ್ಡಬಳ್ಳಾಪುರ ತಾಲೂಕಿನ ದರ್ಗಾಜೋಗಹಳ್ಳಿಗೆ ಬಂದಿದ್ದರು. 10 ತಿಂಗಳ ಗಂಡು ಮಗು ನಿತ್ವಿಕ್ ಅನಾರೋಗ್ಯದ ಕಾರಣ ಚಿಕಿತ್ಸೆಗಾಗಿ ನಗರದ ನಸಿರ್ಂಗ್ ಹೋಮ್‌ಗೆ ದಾಖಲು ಮಾಡಿದ್ದರು, ಆದರೆ ಮೂರು ದಿನದ ಬಳಿಕ ಮಗು ಮೃತಪಟ್ಟಿತ್ತು. ಆಕ್ರೋಶಗೊಂಡ ಪಾಲಕರು ವೈದ್ಯರು ಸರಿಯಾದ ಚಿಕಿತ್ಸೆ ನೀಡದೆ ಸಾವಿಗೆ ಕಾರಣವಾಗಿದ್ದಾರೆ ಎಂದು ದೂರಿದರು.
ಸಿಬ್ಬಂದಿ ಸ್ಪಂದಿಸಲಿಲ್ಲ: ಮಗು ದಾಖಲು ಮಾಡಿಕೊಂಡ ದಿನದಿಂದ ಮಗುವಿಗೆ 11 ಗ್ಲೋಕೋಸ್ ಡ್ರಿಪ್ಸ್ ಹಾಕಿದ್ದಾರೆ, ಮಂಗಳವಾರ ರಾತ್ರಿ ಮಗುವಿನ ಆರೋಗ್ಯದಲ್ಲಿ ಇದ್ದಕ್ಕಿದ್ದಂತೆ ಏರುಪೇರಾಗಿದೆ. ಆದರೆ, ಕನ್ನಡ ಬಾರದ ಉತ್ತರ ಭಾರತೀಯ ವೈದ್ಯರೊಬ್ಬರು ಮಲಗಿದ್ದರು, ಅವರನ್ನು ಎಬ್ಬಿಸಲು ಪ್ರಯತ್ನಪಟ್ಟೆವು, ಅವರು ಸ್ಪಂದಿಸಲಿಲ್ಲ. ಬುಧವಾರ ಬೆಳಗ್ಗೆ 5.30ರ ಸುಮಾರಿಗೆ ನಸಿರ್ಂಗ್ ಹೋಮ್ ಸಿಬ್ಬಂದಿ ಮಗುವನ್ನು ಡಿ- ಕ್ರಾಸ್ ಸಮೀಪದ ಮತ್ತೊಂದು ಖಾಸಗಿ ಅಸ್ಪತ್ರೆಗೆ ತೆಗೆದುಕೊಂಡು ಹೋಗುವಂತೆ ತಿಳಿಸಿದರು, ಅಲ್ಲಿ ಮಗು ನಿತ್ರಾಣಗೊಂಡಿದ್ದು ಇಲ್ಲಿ ಚಿಕಿತ್ಸೆ ಕೊಡಲು ಸಾಧ್ಯವಿಲ್ಲ. ಹೆಚ್ಚಿನ ಚಿಕಿತ್ಸೆಗೆ ಬೇರೊಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದರು. ಬಳಿಕ ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಅಲ್ಲಿನ ವೈದ್ಯರು ಪರೀಕ್ಷಿಸಿ ಮಗು ಮೃತಪಟ್ಟಿರುವುದಾಗಿ ತಿಳಿಸಿದರು ಎಂದು ತಂದೆ ವಿನೋದ್ ಕಣ್ಣೀರು ಹಾಕಿದರು.
ನಿರ್ಜಲೀಕರಣದಿಂದ ಸಾವು: ನಮಗೆ ಪಾಲಕರು ಹಳೆಯ ಪರಿಚಯ, ಆಗಾಗ ಬರುತ್ತಿದ್ದರು, ಆ.13 ರಂದು ಭೇದಿಯಾಗುತ್ತಿದೆ ಎಂದು ಮಗುವನ್ನು ಕರೆತಂದರು, ಮಗುವಿಗೆ ಆಹಾರ ಸೇರುತ್ತಿರಲಿಲ್ಲ, ಭೇದಿಯಿಂದಾಗಿ ನಿತ್ರಾಣಗೊಂಡಿತ್ತು, ನಿರ್ಜಲೀಕರಣದಿಂದ ಬಳಲಿತ್ತು, ಡ್ರಿಪ್ಸ್ ಹಾಕಲು ನರ ಸಿಗಲಿಲ್ಲ, ನಮ್ಮ ಸಿಬ್ಬಂದಿ ಕಷ್ಟಪಟ್ಟು ಡ್ರಿಪ್ಸ್ ಹಾಕಿದ್ದಾರೆ. ಮಗುವಿನ ಚಿಕಿತ್ಸೆಗೆ ಬೇಕಾದ ಹೆಚ್ಚಿನ ಸೌಲಭ್ಯ ನಮ್ಮಲ್ಲಿ ಲಭ್ಯವಿಲ್ಲ. ಹೀಗಾಗಿ ಬೇರೆಡೆ ಚಿಕಿತ್ಸೆ ಕೊಡಿಸಿ ಎಂದು ಹೇಳಿದ್ದೆ. ನನ್ನ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳದ ಅವರು ಈ ಹಿಂದೆ ನೀವೇ ಚಿಕಿತ್ಸೆ ನೀಡಿದ್ದೀರಿ. ಈಗಲೂ ನೀವೇ ನೀಡಿ ಎಂದು ಪಟ್ಟು ಹಿಡಿದಿದ್ದರು. ಮಗುವಿನ ಸಾವಿಗೆ ನಿರ್ಜಲೀಕರಣ ಕಾರಣವೇ ಹೊರತು ನಮ್ಮ ನಿರ್ಲಕ್ಷ್ಯವಲ್ಲ ಎಂದು ನರ್ಸಿಂಗ್‌ಹೋಮ್ ವೈದ್ಯ ಬಸವರಾಜ್ ಪ್ರತಿಕ್ರಿಯಿಸಿದ್ದಾರೆ.