ಬೆಂ.ಗ್ರಾಮಾಂತರ/ದೊಡ್ಡಬಳ್ಳಾಪುರ
ದೊಡ್ಡಬಳ್ಳಾಪುರದಲ್ಲಿನ ಜನಸ್ಪಂದನ ಸಮಾವೇಶದಲ್ಲಿ ಜನಜಾತ್ರೆಯೇ ನೆರೆದಿತ್ತು. ನಾಲ್ಕೂ ದಿಕ್ಕುಗಳಿಂದಲೂ ಬಸ್‌ಗಳು ಸಮಾವೇಶದತ್ತ ಮುಖ ಮಾಡಿದ್ದವು. ಹೊಸಕೋಟೆ ಭಾಗದಿಂದ ಬಂದಿದ್ದ ಸಾವಿರಾರು ಜನ ಸಚಿವ ಎಂಟಿಬಿ ನಾಗರಾಜ್ ಹಾಗೂ ಅವರ ಪುತ್ರ ನಿತೀಶ್ ಪುರುಷೋತ್ತಮ್ ಭಾವಚಿತ್ರಗಳಿರುವ ಟೀ ಶರ್ಟ್‌ಗಳನ್ನು ಧರಿಸಿ ಜೈ ಬಿಜೆಪಿ ಜೈ ಎಂಟಿಬಿ ಎಂಬ ಜಯೋಷ ಮೊಳಗಿಸುತ್ತಿದ್ದ ದೃಶ್ಯ ಕಂಡುಬಂತು. ಅದೇ ರೀತಿ ಚಿಕ್ಕಬಳ್ಳಾಪುರದ ಕಡೆಯಿಂದ ಬಂದಿದ್ದವರು ಸಚಿವ ಸುಧಾಕರ್ ಅವರ ಭಾವಚಿತ್ರವಿರುವ ಟೀಶರ್ಟ್ ಧರಿಸಿ ನಡೆದುಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಮಳೆರಾಯನ ಕೃಪೆ: ತಿಂಗಳಿಂದ ಸುರಿಯುತ್ತಿರುವ ಮಳೆರಾಯ ಸಮಾವೇಶಕ್ಕೆ ಕೃಪೆ ತೋರಿದ್ದ. ಕಾರ್ಯಕ್ರಮ ಸಂಪೂರ್ಣ ಮುಗಿದು ಎಲ್ಲರೂ ಮನೆಗಳತ್ತ ಸುರಕ್ಷಿತವಾಗಿ ಹೊರಡುವವರೆಗೂ ಮಳೆ ಸೂಚನೆಯಲ್ಲಿಯೇ ಜನರನ್ನು ಆಶೀರ್ವದಿಸಿ ಕಳುಹಿಸಿದಂತಿತ್ತು. ಮಧ್ಯಾಹ್ನ 3 ಗಂಟೆ ಸಮಯದಲ್ಲಿ ತುಂತುರು ಮಳೆ ಕಂಡ ಜನ ಕೆಲಕಾಲ ಗಲಿಬಿಲಿಗೊಂಡು ಬಸ್‌ಗಳತ್ತ ಹೆಜ್ಜೆ ಹಾಕಲು ಮುಂದಾದರು. ಆದರೆ ತುಂತುರು ಮಳೆಯೂ ತಕ್ಷಣ ನಿಂತಿದ್ದರಿಂದ ಜನ ಸಮಾಧಾನದ ನಿಟ್ಟುಸಿರು ಬಿಟ್ಟರು.
ಬಸ್‌ಗಳನ್ನೆತ್ತಿದ ಕ್ರೇನ್!: ಪಾರ್ಕಿಂಗ್ ಪ್ರದೇಶದಲ್ಲಿ ಕೆಲವೊಂದು ಬಸ್‌ಗಳು ಕೆಸರಿನಲ್ಲಿ ಸಿಲುಕಿದ್ದವು. ಇಂಥ ಪರಿಸ್ಥಿತಿಯನ್ನು ಮೊದಲೇ ಊಹಿಸಿದ್ದ ಆಯೋಜಕರು ಎಲ್ಲ ನಿಲುಗಡೆ ಸ್ಥಳದಲ್ಲೂ ಜೆಸಿಬಿ ಹಾಗೂ ಕ್ರೇನ್‌ಗಳ ವ್ಯವಸ್ಥೆ ಮಾಡಿದ್ದರು. ಚಕ್ರ ಸಿಲುಕಿಕೊಂಡ ವಿಷಯ ಗಮನಕ್ಕೆ ಬರುತ್ತಿದ್ದಂತೆ ತಕ್ಷಣ ನೆರವಿಗೆ ಧಾವಿಸುತ್ತಿದ್ದರಿಂದ ಹೆಚ್ಚಿನ ತೊಂದರೆಯಾಗಲಿಲ್ಲ.
ಚಪ್ಪಲಿಗಳಿಗೆ ತಡಕಾಟ: ವೇದಿಕೆ ಕಾರ್ಯಕ್ರಮದ ಸುತ್ತಮುತ್ತಲ 2 ಕಿ.ಮೀವರೆಗೆ ವಾಹನ ಪ್ರವೇಶ ನಿರ್ಬಂಧಿಸಿದ್ದರಿಂದ ಬಸ್‌ಗಳಲ್ಲಿ ಬಂದ ಜನ ವೇದಿಕೆಯತ್ತ ನಡೆದು ಬಂದರು. ಈ ವೇಳೆ ತಳ್ಳಾಟ ನೂಕಾಟದಿಂದಾಗಿ ಹಲವರ ಚಪ್ಪಲಿಗಳು ಕಿತ್ತು ಬಂದವು. ಕೆಲವರು ಅವುಗಳನ್ನು ಎತ್ತಿಕೊಳ್ಳುವಷ್ಟರಲ್ಲಿ ಹಿಂದೆ ಬರುತ್ತಿದ್ದ ಜನ ತಳ್ಳಿಕೊಂಡು ಹೋಗುತ್ತಿದ್ದರಿಂದ ಚಪ್ಪಲಿಗಳನ್ನು ತಡಕಾಡುತ್ತಿದ್ದ ದೃಶ್ಯ ಕಂಡುಬಂತು. ಅಯ್ಯೋ ಹೋಗಲಿ ಬಿಡು ಇನ್ನೊಂದು ತಗೋಳಾನ ಎಂದು ಕಿತ್ತುಬಂದ ಚಪ್ಪಲಿಗಳನ್ನು ಪಕ್ಕಕ್ಕೆ ಎಸೆದು ಬರಿಗಾಲಿನಲ್ಲೆ ಬಿಜೆಪಿಗೆ ಜೈ ಎಂದು ಹೊರಡುತ್ತಿದ್ದ ದೃಶ್ಯ ಕಂಡುಬಂತು.
ಖಾಕಿ-ಪಬ್ಲಿಕ್ ಜಟಾಪಟಿ: ದೇವನಹಳ್ಳಿ-ದೊಡ್ಡಬಳ್ಳಾಪುರ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಆಗಿದ್ದರಿಂದ ಸುತ್ತಮುತ್ತಲ ಹಳ್ಳಿಗಳನ್ನು ಸುತ್ತಿ ಬಂದ ಕೆಲವು ವಾಹನ ಸವಾರರು ಸಂಚಾರ ನಿಯಮ ಉಲ್ಲಂಸುತ್ತಿದ್ದ ದೃಶ್ಯ ಕಂಡುಬಂತು. ಈ ವೇಳೆ ಎಲ್ಲೆಂದರಲ್ಲಿ ನುಗ್ಗದಂತೆ ಮನವಿ ಮಾಡಿದ ಪೊಲೀಸರ ಮೇಲೆ ವಾಹನ ಸವಾರರು ಜೋರು ಮಾಡುತ್ತಿದ್ದರು. ಈ ವೇಳೆ ಪೊಲೀಸರು ಹಾಗೂ ಜನರ ನಡುವೆ ಜಟಾಪಟಿ ನಡೆಯಿತಾದರೂ ಎಲ್ಲಿಯೂ ಅತಿರೇಕಕ್ಕೆ ಹೋಗಲಿಲ್ಲ, ಪೊಲೀಸರೂ ಸಹನೆಯಿಂದಲೇ ಜನರನ್ನು ನಿಯಂತ್ರಿಸುವಲ್ಲಿ ಸೈ ಎನಿಸಿಕೊಂಡರು.
ಹೊರಗೇ ಉಳಿದ ಅರ್ಧ ಜನ: ವೇದಿಕೆಯಲ್ಲಿ ಸುಮಾರು 1.20 ಲಕ್ಷ ಜನ ಕುಳಿತುಕೊಳ್ಳುವಷ್ಟು ಕುರ್ಚಿಗಳ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆಯೇ ಬಂದ ಲಕ್ಷಾಂತರ ಜನ ಅಷ್ಟೂ ಕುರ್ಚಿಗಳಲ್ಲಿ ಆಸೀನರಾಗಿದ್ದರು. ಅಲ್ಲದೆ ಮುಂಜಾನೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿದ್ದವರು ಕುರ್ಚಿ ಬಿಟ್ಟು ಕದಲಲಿಲ್ಲ. ಇದರಿಂದ 11 ಗಂಟೆ ಮೇಲೆ ಬಂದ ಜನರಿಗೆ ಕುಳಿತುಕೊಳ್ಳಲು ಜಾಗವಿಲ್ಲದೆ ವೇದಿಕೆ ಸುತ್ತಮುತ್ತಲಿನ ಜಾಗಗಳನ್ನು ಆಶ್ರಯಿಸಿದರು. ಬರಬರುತ್ತಾ ಜನಸಂದಣಿ ಹೆಚ್ಚಿದ್ದರಿಂದ ಲಕ್ಷಾಂತರ ಜನ ವೇದಿಕೆಯತ್ತ ಬರಲು ಸಾಧ್ಯವಾಗದೆ ಅನತಿ ದೂರದಲ್ಲೇ ಉಳಿಯುವಂತಾಯಿತು. ಇನ್ನು ಹಿರಿಯ ನಾಗರಿಕರು ಬಸ್‌ಗಳಲ್ಲೇ ವಿಶ್ರಾಂತಿ ಪಡೆಯುತ್ತಿದ್ದರು.
ಕಾರ್ಯಕ್ರಮದ ಸೈಡ್‌ಲೈಟ್
ರೂಟ್ ಮ್ಯಾಪ್ ಹೇಗಿತ್ತು?: ಬೆಂಗಳೂರಿನಿಂದ ಯಲಹಂಕ, ಮಾರಸಂದ್ರ ಮೂಲಕ ರಘುನಾಥಪುರ ತಲುಪುವುದು.(40ಕಿ.ಮೀ ಅಂತರ) ಕೋಲಾರ ಕಡೆಯಿಂದ ಸೂಲಿಬೆಲೆ ರಸ್ತೆಯಲ್ಲಿ ಸಾಗಿ ದೇವನಹಳ್ಳಿ ಮಾರ್ಗದ ಮೂಲಕ ಕಾರ್ಯಕ್ರಮ ಸ್ಥಳ ತಲುಪುವುದು.(74 ಕಿ.ಮೀ) ನೆಲಮಂಗಲದಿಂದ (32 ಕಿ.ಮೀ) ಹಾಗೂ ತುಮಕೂರಿನಿಂದ ( 52ಕಿ.ಮೀ) ಬರುವವರು ಮಧುರೆ ಮಾರ್ಗವಾಗಿ ದೇವನಹಳ್ಳಿ-ದೊಡ್ಡಬಳ್ಳಾಪುರ ಹೆದ್ದಾರಿಯಲ್ಲಿ ಸಾಗಿ ರಘುನಾಥಪುರ ತಲುಪಿದರು. ಚಿಕ್ಕಬಳ್ಳಾಪುರಿಂದ ಗೌರಿಬಿದನೂರು ಮಾರ್ಗವಾಗಿ ದೊಡ್ಡಬಳ್ಳಾಪುರ ಟಿಬಿ ಸರ್ಕಲ್ ದಾಟಿ ದೇವನಹಳ್ಳಿ-ದೊಡ್ಡಬಳ್ಳಾಪುರ ಹೆದ್ದಾರಿ ಮೂಲಕ ಕಾರ್ಯಕ್ರಮದ ಸ್ಥಳ ತಲುಪುವುದು (29 ಕಿ.ಮೀ)
ಪೊಲೀಸ್ ಸರ್ಪಗಾವಲು: ಸಮಾವೇಶದಲ್ಲಿ ಬರೋಬ್ಬರಿ 3 ಲಕ್ಷ ಜನ ಸೇರಿದ್ದರು. ದೊಡ್ಡಬಳ್ಳಾಪುರದಿಂದ 4 ಕಿ.ಮೀ ಅಂತರದಲ್ಲಿರುವ ರಘುನಾಥಪುರದ ಸುತ್ತಮುತ್ತಲ ಪೊಲೀಸ್ ಸರ್ಪಕಾವಲು ಏರ್ಪಡಿಸಲಾಗಿತ್ತು. ಹೆದ್ದಾರಿಯುದ್ದಕ್ಕೂ ಸಂಚಾರ ಪೊಲೀಸರು ಹಾಗೂ ಗೃಹರಕ್ಷಕ ಸಿಬ್ಬಂದಿ ವಾಹನದಟ್ಟಣೆ ನಿಯಂತ್ರಣಕ್ಕೆ ಬೆವರು ಹರಿಸಿದರು. 50ಕ್ಕೂ ಹೆಚ್ಚು ಆಂಬುಲೆನ್ಸ್ ಹಾಗೂ ಅಗ್ನಿಶಾಮಕ ವಾಹನಗಳ ವ್ಯವಸ್ಥೆ ಕಲ್ಪಿಸಲಾಗಿತ್ತು. 11 ಡಿವೈಎಸ್‌ಪಿ, 4 ಎಸಿಪಿ, 42 ವೃತ್ತ ನಿರೀಕ್ಷಕರು, 100 ಪೊಲೀಸ್ ಸಬ್‌ಇನ್‌ಸ್ಪೆಪೆಕ್ಟರ್, 150 ಎಎಸ್‌ಐ, 1400 ಕಾನ್‌ಸ್ಟೆಬಲ್‌ಗಳು, 4 ಸಾವಿರ ಗೃಹರಕ್ಷಕ ಸಿಬ್ಬಂದಿ, 6 ಕೆಎಸ್‌ಆರ್‌ಪಿ ತುಕಡಿ, 4 ಡಿಎಆರ್‌ಗಳನ್ನು ನಿಯೋಜಿಸಲಾಗಿತ್ತು.