ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ಯೋಗಾಸನದಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿ ಜತೆಗೆ ದೃಢ ಮನಸ್ಸು ರೂಪುಗೊಳ್ಳಲು ಸಹಕಾರಿಯಾಗುತ್ತದೆ ಎಂದು ರಾಜ್ಯ ಸ್ಕೌಟ್ಸ್ ಮತ್ತು ಗೈಡ್ಸ್ ಆಯುಕ್ತ ಪಿಜಿಆರ್ ಸಿಂಧ್ಯಾ ಹೇಳಿದರು.
ನಗರದ ಬೆಸೆಂಟ್ ಪಾರ್ಕ್ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಕೇಂದ್ರದಲ್ಲಿ ನಿಸರ್ಗ ಯೋಗ ಕೇಂದ್ರ, ಜಿಲ್ಲಾ ಅಮೇಚ್ಯೂರ್ ಯೋಗಾಸನ ಕ್ರೀಡಾ ಸಂಸ್ಥೆ, ರಾಜ್ಯ ಅಮೆಚ್ಯೂರ್ ಯೋಗ ಸ್ಪೋರ್ಟ್ಸ್ ಅಸೋಸಿಯೇಷನ್‌ನಿಂದ ಕರ್ನಾಟಕ ಸಬ್ ಜೂನಿಯರ್ ಯೋಗಾಸನ ಸ್ಪೋರ್ಟ್ಸ್ ಚಾಂಪಿಯನ್‌ಶಿಪ್ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ವಾತಂತ್ರ್ಯದ ನಂತರ ಶಾಲೆಗಳನ್ನು ಆರಂಭಿಸಿದಂತೆ, ಆಸ್ಪತ್ರೆಗಳ ಜತೆ ಯೋಗ ಕೇಂದ್ರ ಆರಂಭಿಸಿದ್ದರೆ, ದೇಶದಲ್ಲಿ ಕಾಯಿಲೆಗಳು ಹೆಚ್ಚಾಗುತ್ತಿರಲಿಲ್ಲ. ಉತ್ತಮ ಆರೋಗ್ಯಕ್ಕೆ ಯೋಗಕ್ಕಿಂತ ಉತ್ತಮ ಹಾದಿ ಮತ್ತೊಂದಿಲ್ಲ. ಜೀವನದಲ್ಲಿ ಯಶಸ್ವಿಯಾಗಲು ಸಧೃಡ ಮನಸ್ಸು ಬೇಕು. ಯೋಗ ಶಿಕ್ಷಕರಿಗೆ ಮುಂದಿನ ದಿನದಲ್ಲಿ ಹೆಚ್ಚಿನ ಬೇಡಿಕೆ ಬರುತ್ತದೆ. ಯೋಗದಲ್ಲಿ ಅಂತಹ ಶಕ್ತಿ ಇದ್ದು, ಹೆಚ್ಚಿನ ಸಂಖ್ಯೆಯಲ್ಲಿ ಯೋಗಾಭ್ಯಾಸಕ್ಕೆ ಮಕ್ಕಳನ್ನು ಕರೆತರಬೇಕು ಎಂದರು.
ಕೆಎಸ್‌ಎವೈಎಸ್‌ಎ ಅಧ್ಯಕ್ಷ ಗಂಗಾಧರಪ್ಪ ಮಾತನಾಡಿ, ಹಿಂದೆ ಯೋಗ ಹೆಚ್ಚು ಪ್ರಚಲಿತವಾಗಿರಲಿಲ್ಲ. ಜನ ಸಾಮಾನ್ಯರಿಗೂ ಯೋಗ ತಲುಪಿಸುವುದು ಸಂಸ್ಥೆಯ ಉದ್ದೇಶವಾಗಿತ್ತು. ಸ್ಪರ್ಧೆಗಳ ಮೂಲಕ ಯೋಗಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ರಾಜ್ಯಮಟ್ಟದಲ್ಲಿ ಆಯ್ಕೆಯಾದವರನ್ನು ರಾಷ್ಟ್ರಮಟ್ಟದಲ್ಲಿ ನಡೆಯುವ ಸ್ಪರ್ಧೆಗೆ ಆಯ್ಕೆಯಾಗಲಿದ್ದಾರೆ ಎಂದರು.