ಜಿಲ್ಲೆ

ಅಡ್ಡಾದಿಡ್ಡಿ ವಾಹನ ನಿಲುಗಡೆಯಿಂದ ಕಿರಿಕಿರಿ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ನಗರದ ಶೇಣಿಗರಪೇಟೆ ಹಾಗೂ ಚಿಕ್ಕಪೇಟೆಗೆ ತೆರಳುವ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ನಿಲುಗಡೆ ಮಾಡುವುದರಿಂದ ಈ ಭಾಗದ ನಾಗರಿಕರಿಗೆ ಓಡಾಡಲು ಸಮಸ್ಯೆಯಾಗುತ್ತಿದೆ ಎಂದು ಆರೋಪಿಸಿ ನಗರದಲ್ಲಿ ಸ್ಥಳೀಯ ನಿವಾಸಿಗಳು ಪ್ರತಿಭಟಿಸಿದರು.
ಬಸ್ ನಿಲ್ದಾಣದ ಸಮೀಪದಲ್ಲಿರುವ ಶೇಣಿಗರಪೇಟೆ, ಚಿಕ್ಕಪೇಟೆಗೆ ಓಡಾಡಲು ಸಾಧ್ಯವಾಗದಂತೆ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ಆಸ್ಪತ್ರೆಗಳಿಗೆ ರೋಗಿಗಳು ತೆರಳಲು ಪರದಾಡುವಂತಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳಿಗೆ, ನಗರಸಭೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ದೂರು ನೀಡಿದರೂ ಸ್ಪಂದಿಸುತ್ತಿಲ್ಲ. ಇಲ್ಲಿರುವ ಅಂಗಡಿಗಳಿಗೆ ಸೂಕ್ತ ಪಾಕಿರ್ಂಗ್ ವ್ಯವಸ್ಥೆಯೂ ಇಲ್ಲ. ಇದರಿಂದ ಜನರು ನಡು ರಸ್ತೆಯಲ್ಲೇ ವಾಹನ ನಿಲ್ಲಿಸುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿ ಶ್ವೇತಾ ದೂರಿದರು.
ಸ್ಥಳೀಯ ನಿವಾಸಿ ಚಂದ್ರಶೇಖರ ಮಾತನಾಡಿ, ನಗರದ ಬಸ್ ನಿಲ್ದಾಣ ಪಕ್ಕದಲ್ಲಿ ಇದ್ದರೂ ಇಲ್ಲಿನ ಸ್ಥಿತಿ ಶೋಚನೀಯವಾಗಿದೆ. ಹೇಮಾವತಿ ಪೇಟೆಯಿಂದ ಕುಡಿಯುವ ನೀರು ತರಲು ಸುತ್ತಿಕೊಂಡು ಬರಬೇಕಾದ ಪರಿಸ್ಥಿತಿ ಇದೆ. ಅಧಿಕಾರಿಗಳು, ನಗರಸಭೆ ಸದಸ್ಯರಿಗೆ ತಿಳಿಸಿದರೂ ಸ್ಪಂದಿಸುತ್ತಿಲ್ಲ. ಅಡ್ಡಾದಿಡ್ಡಿಯಾಗಿ ದ್ವಿಚಕ್ರ ವಾಹನ ನಿಲ್ಲಿಸುವುದರಿಂದ ನಡೆದುಕೊಂಡು ಓಡಾಡಲು ಸ್ಥಳವಿಲ್ಲದಂತಾಗಿದೆ. ಆದಷ್ಟು ಬೇಗ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.