ಜಿಲ್ಲೆ

ದಾನಿಗಳ ನೆರವು ಪಡೆದು ಶೈಕ್ಷಣಿಕವಾಗಿ ಮುಂದೆ ಬನ್ನಿ

ಶಿವರಾಜ.ಎಂ

ಪವಾಡ ಶ್ರೀ ಬಸವಣ್ಣ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಕಿವಿಮಾತು

ವಿದ್ಯಾರ್ಥಿಗಳಿಗೆ ಕಲಿಕೋಪಕರಣ ವಿತರಣೆ


ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ದಾನಿಗಳು, ಸಂಘ-ಸಂಸ್ಥೆಗಳು ನೀಡುವ ಸೌಲಭ್ಯ ಸದ್ಬಳಕೆ ಮಾಡಿಕೊಂಡು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು ಎಂದು ಪವಾಡ ಶ್ರೀ ಬಸವಣ್ಣ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ನಗರದ ಬಸವ ಭವನದಲ್ಲಿ ರಾಜ್ಯ ವೀರಶೈವ ಲಿಂಗಾಯತ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘ, ಪವಾಡಶ್ರೀ ಬಸವಣ್ಣದೇವರ ಮಠ, ಬಸವ ಭಾರತ ಪ್ರತಿಷ್ಠಾನ ಹಾಗೂ ನೆಲಮಂಗಲ ಪವಾಡ ಶ್ರೀ ಬಸವಣ್ಣ ದೇವರ ಮಠದಿಂದ ಹಮ್ಮಿಕೊಂಡಿದ್ದ ತಾಲೂಕಿನ ಎಲ್ಲ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವೀರಶೈವ ಲಿಂಗಾಯತ ಮಕ್ಕಳಿಗೆ ಲೇಖನ ಸಾಮಗ್ರಿ ಮತ್ತು ನೋಟ್ ಪುಸ್ತಕ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ದಸರಾ ರಜೆಯ ವೇಳೆ ಈ ಭಾಗದ ಸುತ್ತಮುತ್ತಲಿನ ಮಠಗಳಿಗೆ ಮಕ್ಕಳನ್ನು ಕರೆದೊಯ್ದು ಮಠಗಳ ಪರಿಚಯ ಮಾಡಿಕೊಡಲಾಗುವುದು. ಸರ್ಕಾರಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಓದಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ಪ್ರಗತಿಗೆ ಉಚಿತ ದಾಖಲಾತಿ ನೀಡಲಾಗುವುದು ಎಂದರು.
ವನಕಲ್ಲು ಮಠದ ಶ್ರೀ ಬಸವ ರಮಾನಂದ ಸ್ವಾಮೀಜಿ ಮಾತನಾಡಿ, ಶ್ರೀ ಶಿರಸಂಗಿ ಮಹಾಲಿಂಗ ಸ್ವಾಮೀಜಿ ಅವರು ಲಿಂಗಾಯತ ವಿದ್ಯಾರ್ಥಿಗಳಿಗಾಗಿ ರಾಜ್ಯದಲ್ಲಿ ಮೊದಲ ಬಾರಿಗೆ 1919ರಲ್ಲಿ ಹಾಸ್ಟೆಲ್ ತೆರೆದರು. ಸಿದ್ಧಗಂಗಾನ ಶ್ರೀಗಳು ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಬಡ ಮಕ್ಕಳ ಅನುಕೂಲಕ್ಕಾಗಿ ದೊಡ್ಡಬಳ್ಳಾಪುರಕ್ಕೆ ಬಂದು ನೋಟ್ ಬುಕ್ ನೀಡಲಾಗುತ್ತಿದೆ. ಅನ್ನ ಕ್ಷಣಿಕ ತೃಪ್ತಿ ನೀಡಿದರೆ, ಶಿಕ್ಷಣ ಬಳಸಿದಷ್ಟು ಹೆಚ್ಚು ಜ್ಞಾನ ನೀಡುತ್ತದೆ ಎಂಬುದನ್ನು ಅರಿತು ವಿದ್ಯಾರ್ಥಿಗಳು ಸತತ ಅಭ್ಯಾಸ ಮಾಡಿ ಪ್ರಗತಿ ಸಾಧಿಸಬೇಕು ಎಂದರು.
ರಾಜ್ಯ ವೀರಶೈವ ಲಿಂಗಾಯತ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಆರ್. ನಾಗರಾಜ್, ಉಪನ್ಯಾಸಕರಾದ ಪ್ರೊ.ಬಾಲಚಂದ್ರ, ಬಿಇಒ ರಂಗಪ್ಪ ಇತರರು ಇದ್ದರು.