ಜಿಲ್ಲೆ

ನಗರಸಭೆ ಆಡಳಿತ ಯಂತ್ರಕ್ಕೆ ತುಕ್ಕು!

ಶಿವರಾಜ.ಎಂ

ದೊಡ್ಡಬಳ್ಳಾಪುರ ರಸ್ತೆ ಗುಂಡಿ ಗಂಡಾಂತರಕ್ಕೆ ಜನ ಹೈರಾಣ

ಅಧಿಕಾರಿಗಳ ಜಾಣಮೌನ

ವೆಂಕಟರಾಜು ಎಸ್. ದೊಡ್ಡಬಳ್ಳಾಪುರ
ನಗರಸಭೆ ಜನಪ್ರತಿನಿಧಿಗಳು ಅಧಿಕಾರ ಗದ್ದುಗೆ ಹಿಡಿದು ಎರಡೂವರೆ ವರ್ಷ ಕಳೆಯುತ್ತಿದ್ದರೂ ನಗರವನ್ನು ಕಾಡುತ್ತಿರುವ ‘ಗುಂಡಿ ಗಂಡಾಂತರ’ಕ್ಕೆ ಮುಕ್ತಿಕೊಡುವ ಮನಸ್ಸು ಮಾಡಿಲ್ಲ.
ನಗರದ ಯಾವುದೇ ರಸ್ತೆಗಳಲ್ಲಿ ಸಾಗಿದರೂ ಮಂಡಿಯುದ್ದ ಗುಂಡಿಗಳು ಸಾರ್ವಜನಿಕರನ್ನು ಹೈರಾಣಾಗಿಸುತ್ತಿದ್ದು, ನಗರಸಭೆ ಆಡಳಿತ ಯಂತ್ರಕ್ಕೆ ತುಕ್ಕು ಹಿಡಿದಿದೆಯೇನೋ ಎಂಬಂತೆ ಭಾಸವಾಗುತ್ತಿದೆ.
ನಗರಸಭೆ ಪ್ರಸಕ್ತ ವರ್ಷವೂ ಎರಡೂವರೆ ವರ್ಷದಿಂದ ರಸ್ತೆಗಳಲ್ಲಿನ ಗುಂಡಿಗಳ ರಿಪೇರಿ ಕೆಲಸ ನಡೆಸಿಲ್ಲ. ಮಳೆಗಾಲಕ್ಕೂ ಮುನ್ನವೇ ನಗರ ಪ್ರದೇಶಗಳಲ್ಲಿನ ಗುಂಡಿಗಳನ್ನು ವೈಜ್ಞಾನಿಕವಾಗಿ ಪ್ಯಾಚ್‌ವರ್ಕ್ ಮಾಡಬೇಕಾದ ನಗರಸಭೆ ಆಡಳಿತ ಗಾಢನಿದ್ರೆಯಿಂದ ಎಚ್ಚರಗೊಳ್ಳುತ್ತಿಲ್ಲ. ನಗರಸಭೆಗೆ ಗ್ರಹಣ ಹಿಡಿದಿದೆ, ಜನಪ್ರತಿನಿಧಿಗಳು ಕುರ್ಚಿಗೆ ಅಂಟಿ ಕುಳಿತುಬಿಟ್ಟಿದ್ದಾರೆ, ಅಭಿವೃದ್ಧಿ ಕೆಲಸಗಳನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ನಗರಸಭೆ ವಿರುದ್ಧ ಹರಿಹಾಯುತ್ತಿದ್ದಾರೆ. ಆದರೂ ನಗರಸಭೆ ಎಚ್ಚೆತ್ತುಕೊಳ್ಳುವ ಲಕ್ಷಣ ಕಂಡುಬರುತ್ತಿಲ್ಲ.

ಗುಂಡಿಗಳಿಲ್ಲದ ರಸ್ತೆಗಳೇ ಇಲ್ಲ: ನೇಕಾರರ ನಗರವೆಂಬ ಖ್ಯಾತಿ ಪಡೆದಿರುವ ದೊಡ್ಡಬಳ್ಳಾಪುರ ಈಗ ಗುಂಡಿಪುರ ಎಂಬ ಕುಖ್ಯಾತಿ ಮೆತ್ತಿಕೊಳ್ಳುವಂತಾಗಿದೆ. ನಗರದಲ್ಲಿನ ಪ್ರತಿ ರಸ್ತೆಗಳಲ್ಲಿ ನೂರಾರು ಗುಂಡಿಗಳು ವಾಹನ ಸವಾರರ ಬಲಿಗಾಗಿ ಕಾದು ಕುಳಿತಂತಿವೆ.ಆದರೆ ನಗರಸಭೆ ಆಡಳಿತ ಯಂತ್ರ ಐಸಿಯು ಸೇರಿರುವುದರಿಂದ ಜನರ ಕಷ್ಟ ಕೇಳುವವರೇ ಇಲ್ಲದಂತಾಗಿದೆ. ನಗರದಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಜನ ವಾಸವಾಗಿದ್ದಾರೆ. ದಿನಿನಿತ್ಯದ ಕಾರ್ಯಗಳಿಗೆ ಬೈಕ್, ಕಾರು ಇತರ ವಾಹನಗಳಲ್ಲಿ ಸಂಚರಿಸುತ್ತಾರೆ, ಆದರೆ ನಗರದ ರಸ್ತೆಗಳು ಹಳ್ಳ ಗುಂಡಿಗಳಿಂದ ತುಂಬಿದ್ದು ರಸ್ತೆ ದಾಟಲು ವಾಹನ ಸವಾರರು ಪ್ರತಿನಿತ್ಯ ಕಸರತ್ತು ನಡೆಸಬೇಕಾಗಿದೆ. ಅದರಲ್ಲೂ ರಂಗಪ್ಪ ವೃತ್ತ, ಹಳೇ ಆಸ್ಪತ್ರೆ ಸರ್ಕಲ್, ಕಜಾಪ ಮುಂಭಾಗ, ಮಾರುಕಟ್ಟೆ ರಸ್ತೆ, ಕಾಳಿಕಾಂಬ ರಸ್ತೆ, ಚೌಕದ ರಸ್ತೆ, ಸಿನಿಮಾ ರಸ್ತೆ, ಸ್ವಾಮಿ ವಿವೇಕಾನಂದ ರಸ್ತೆ, ಹಳೇ ಪೊಲೀಸ್ ಠಾಣೆ ರಸ್ತೆಗಳು ಸಂಪೂರ್ಣ ಗುಂಡಿಮಯವಾಗಿದ್ದು ಮಳೆನೀರು ನಿಂತು ರಸ್ತೆಯೇ ಕಣ್ಮರೆಯಾದಂತಾಗಿದೆ.

ಮೌನಕ್ಕೆ ಜಾರಿದ ಪೌರಾಯುಕ್ತ, ಅಧ್ಯಕ್ಷೆ, ಉಪಾಧ್ಯಕ್ಷೆ: ನಗರಸಭೆ ಆಡಳಿತಕ್ಕೆ ಚುರುಕು ಮುಟ್ಟಿಸಬೇಕಾದ ಆಯುಕ್ತರು ರಿಸ್ಕ್ ತೆಗೆದುಕೊಳ್ಳುವ ಗೋಜಿಗೆ ಹೋಗಿಲ್ಲ. ಸಮಯ ಕಳೆದರೆ ಸಾಕು ಎಂಬಂತೆ ವರ್ತಿಸುತ್ತಿದ್ದಾರೆ. ಇನ್ನೂ ಕಳೆದೆರಡು ವರ್ಷಗಳಿಂದ ಅಧ್ಯಕ್ಷೆ, ಉಪಾಧ್ಯಕ್ಷೆಯಾಗಿ ಕರ್ತವ್ಯ ಮಾಡುತ್ತಿರುವ ಸುಧಾರಣಿ, ಫರ್ಹನಾ ತಾಜ್ ಸಾರ್ವಜನಿಕರ ಸಮಸ್ಯೆ ಆಲಿಸಿ ತುಟಿ ಬಿಚ್ಚಿದ್ದೆ ಇಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕೋಳಿ ತ್ಯಾಜ್ಯಕ್ಕಿಲ್ಲ ಕಡಿವಾಣ: ನಗರ ವ್ಯಾಪ್ತಿಯಲ್ಲಿ ಕೋಳಿ ತ್ಯಾಜ್ಯ ದೊಡ್ಡ ಸಮಸ್ಯೆಯಾಗಿದೆ. ನಾಗರಕೆರೆ, ಮುತ್ತೂರು ಕೆರೆ ಸೇರಿದಂತೆ ರಸ್ತೆ ಬದಿಗಳಲ್ಲಿ ತ್ಯಾಜ್ಯ ತಂದು ಸುರಿಯಲಾಗುತ್ತಿದೆ. ನಗರದಲ್ಲಿ ಎಷ್ಟು ಕೋಳಿ ಅಂಗಡಿಗಳಿವೆ ಎಂಬ ನಿಖರ ಮಾಹಿತಿ ಅಧಿಕಾರಿಗಳಿಗೆ ಇಲ್ಲ. ಅಂಕಿ-ಅಂಶಗಳಿಲ್ಲದೆ ಆಡಳಿತ ನಡೆಸುತ್ತಿದ್ದಾರೆ. ವಾರ್ಡ್‌ಗಳಲ್ಲಿನ ಕಸದ ರಾಶಿಗೆ ಮುಕ್ತಿ ಸಿಗುವುದೇ ಅನುಮಾನವಾಗಿದೆ.