ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ಯುವ ಜನತೆ ತಮ್ಮ ವಿದ್ಯಾರ್ಥಿ ದಿನಗಳಲ್ಲಿ ವಿದ್ಯಾಭ್ಯಾಸದಲ್ಲಿ ಸಾಧನೆಗೈಯುವಂತ ಕನಸು, ಇಚ್ಛಾಶಕ್ತಿಯನ್ನು ರೂಢಿಸಿಕೊಂಡರೆ ಮಾತ್ರ ಮುಂದೊಂದು ದಿನ ಬಹುದೊಡ್ಡ ಸಾಧನೆ ಮಾಡಲು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದರು.
ನಗರದ ಕನ್ನಡ ಜಾಗೃತ ಪರಿಷತ್ ಸಭಾಂಗಣದಲ್ಲಿ ಕನ್ನಡಿಗರ ಕರವೇ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆ ಹಾಗೂ ಕನ್ನಡ ಭಾಷಾ ವಿಷಯದಲ್ಲಿ ತಾಲೂಕಿಗೆ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಸಕ್ರಿಯರಾಗಿದ್ದಾಗ ಉತ್ತಮ ಆಲೋಚನೆಗಳು ಬರಲಿವೆ. ಯಾವುದೇ ಕಾರಣಕ್ಕೂ ಕೀಳರಿಮೆಗೆ ಒಳಗಾಗದೆ ಸಂಕಲ್ಪ ಮಾಡಿದರೆ ಉತ್ತಮಮಟ್ಟಕ್ಕೆ ಬೆಳೆಯಬಹುದು. ಒಮ್ಮೆ ಎಡವಿದಾಕ್ಷಣ ಸುಮ್ಮನಾಗದೆ ಮತ್ತೆ ಮತ್ತೆ ಮೇಲೇಳಲು ಪ್ರಯತ್ನಿಸಬೇಕು. ಪ್ರತಿಭೆ ಅರಳಲು ಮನೆಯಲ್ಲೂ ಆ ವಾತಾವರಣ ಇರಬೇಕು. ಇಚ್ಛಾಶಕ್ತಿ ಹೊಂದಿದ್ದರೆ ಅಡೆತಡೆಗಳನ್ನು ದೂರ ಮಾಡಬಹುದು. ನಿಷ್ಠೆ, ಪ್ರಾಮಾಣಿಕತೆ, ಸತ್ಯವಂತರಾದರೆ ಸಾಧನೆ ಸುಲಭವಾಗಲಿದೆ ಎಂದರು,
ವೀರಪ್ಪ ಮೊಯ್ಲಿಯವರ ಮತ್ತೊಂದು ಪುಸ್ತಕವಾದ ಜಗತ್ತಿನ ನಾಗರೀಕತೆಯ ಕುರಿತ ಕೃತಿ ಮೂರು ಸಾವಿರ ಪುಟಗಳು ಸಿದ್ಧವಾಗಿದ್ದು, 2024ರ ಜನವರಿಯಲ್ಲಿ ಪ್ರಥಮ ಸಂಪುಟ ಬಿಡುಗಡೆಯಾಗಲಿದೆ ಎಂದು ವೀರಪ್ಪ ಮೊಯ್ಲಿ ತಿಳಿಸಿದರು.
ಕನ್ನಡ ಭಾಷೆಯ ಶಾಸ್ತ್ರೀಯ ಸ್ಥಾನಮಾನ ನಾನು ಕೇಂದ್ರ ಕಾನೂನು ಮಂತ್ರಿಯಾಗಿದ್ದಾಗ ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಅರ್ಧಪಾಲು ಕೊಡಬೇಕು ಎಂಬ ಕಾಯ್ದೆ ಜಾರಿಗೆ ಸಾಕಷ್ಟು ವಿರೋಧ ವ್ಯಕ್ತವಾದರೂ ಕಾನೂನು ಜಾರಿಗೆ ತರಲಾಯಿತು. ಚಿನ್ನಪ್ಪರೆಡ್ಡಿ ಆಯೋಗದ ಶಿಫಾರಸುಗಳನ್ನು ಅನುಷ್ಠಾನ ಮಾಡಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಿದೆವು. ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ತಂದರೂ ಮುಂದುವರಿಸಿಕೊಂಡು ಹೋಗದಿರುವುದು ಬೇಸರದ ಸಂಗತಿ ಎಂದು ಮಾಜಿ ಸಿಎಂ ತಿಳಿಸಿದರು.
ಶಾಸಕ ಧೀರಜ್ ಮುನಿರಾಜು ಮಾತನಾಡಿ, ಬೆಂಗಳೂರಿನಲ್ಲಿ ಅತ್ಯುತ್ತಮ ವಿದ್ಯಾಸಂಸ್ಥೆಗಳಿಗೆ. ಇಡೀ ವಿಶ್ವಕ್ಕೆ ಸೆಡ್ಡು ಒಡೆಯುವಂತ ಐಐಎಸ್‌ಸಿ ನಮ್ಮಲ್ಲಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಅವಕಾಶ ವಂಚಿತರಾಗದೆ ಶ್ರಮವಹಿಸಿ ಸಾಧನೆ ಮಾಡಿದಾಗ ಅವಕಾಶ ಸಿಗಲಿವೆ ಎಂದರು.
ಕರವೇ ಗೌರವಾಧ್ಯಕ್ಷ ಡಾ.ಹುಲಿಕಲ್ ನಟರಾಜ್ ಮಾತನಾಡಿ, ತಂತ್ರಜ್ಞಾನದ ಯುಗದಲ್ಲೂ ವಿದ್ಯಾವಂತರೇ ಹೆಚ್ಚು ಮೂಢನಂಬಿಕೆಗಳಿಗೆ ಬಲಿಯಾಗುತ್ತಿದ್ದಾರೆ. ವಿದ್ಯಾರ್ಥಿಗಳು ವಿವೇಚನೆ, ಪ್ರಶ್ನಿಸುವ ಗುಣ, ಆಲೋಚನೆ ಮಾಡುವ ಶಕ್ತಿ ಬೆಳೆಸಿಕೊಳ್ಳಬೇಕು. ಹಿಡಿ-ಬಡಿ ಕೊಲ್ಲುವ ಸಂಸ್ಕೃತಿಗೆ ಅವಕಾಶ ನೀಡಬಾರದು. ಓದಿನೊಂದಿಗೆ ಅಸ್ತಿತ್ವ ಉಳಿಸಿಕೊಳ್ಳಲು ಚಿಂತನೆ ಮಾಡಬೇಕು ಎಂದರು.
ವೀರಪ್ಪ ಮೊಯ್ಲಿ ಅವರಿಗೆ ಲೋಕಸೇವಾನಿರತ ಶ್ರೀಕೊಂಗಾಡಿಯಪ್ಪ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಿಇಒ ರಂಗಪ್ಪ, ತಾಲೂಕು ವೈದ್ಯಾಧಿಕಾರಿ ಡಾ.ಪರಮೇಶ್ವರ, ಮಂಜುನಾಥ ಅವರನ್ನು ಸನ್ಮಾನಿಸಲಾಯಿತು.