ದೊಡ್ಡಬಳ್ಳಾಪುರ : ನಗರಸಭೆಯಲ್ಲಿ ಹಿಂದಿನ ವರ್ಷಗಳಲ್ಲಿ ಶೇ.85ರಿಂದ 90 ಇದ್ದ ತೆರಿಗೆ ವಸೂಲಾತಿ ಕಳೆದ 9 ತಿಂಗಳ ಅವಧಿಯಲ್ಲಿ ಶೇ. 100 ಆಗಿದೆ. ಮತ್ತು ಇ&ಖಾತಾ ಅಭಿಯಾನದಲ್ಲಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿದೆ ಎಂದು ನಗರಸಭೆ ಅಧ್ಯೆ ಸುಮಿತ್ರಾ ಆನಂದ್ ತಿಳಿಸಿದರು.
ನಗರಸಭೆ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಶೇ.100 ತೆರಿಗೆ ವಸೂಲಿ ಮಾಡುವ ಮೂಲಕ ನಗರಸಭೆಗೆ ಆದಾಯ ಹೆಚ್ಚಿಸಲಾಗಿದೆ. ನಗರದ ಅಭಿವೃದ್ಧಿಗಾಗಿ ಪ್ರತಿ ವಾರ್ಡಿಗೂ 10 ಲಕ್ಷ ರೂ. ಅನುದಾನ ನೀಡಲಾಗಿದೆ. ಇ&ಖಾತಾ ಅಭಿಯಾನವನ್ನು ಉತ್ತಮ ರೀತಿಯಲ್ಲಿ ಅನುಷ್ಠಾನಗೊಳಿಸಲು ನಗರದ 31 ವಾರ್ಡ್ಗಳಲ್ಲೂ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿ, ಅತಿಹೆಚ್ಚು ಇ&ಖಾತೆ ಮಾಡಿಸುವ ಮೂಲಕ ಜಿಲ್ಲೇಯಲ್ಲೇ ಮೊದಲ ಸ್ಥಾನದಲ್ಲಿದ್ದೇವೆ ಎಂದರು.
ನಗರಸಭೆ ಉಪಾಧ್ಯಕ್ಷ ಎಂ.ಮಲ್ಲೇಶ್ ಮಾತನಾಡಿ, ನಗರದಲ್ಲಿ ಪ್ರಮುಖವಾಗಿ ಕಸ ವಿಲೇವಾರಿ ಸಮಸ್ಯೆಯಿದ್ದು, ಈ ಸಮಸ್ಯೆಗೆ ಪರಿಹಾರವಾಗಿ ಎನ್ಜಿಒ ಸಂಸ್ಥೆಯೊಂದು ನಮ್ಮೊಂದಿಗೆ ಕೈ ಜೋಡಿಸಿದ್ದು, ಹಸಿ ಕಸವನ್ನು ರೈತರ ಹೊಲಗಳಿಗೆ ನೀಡಲಾಗುತ್ತಿದೆ. ಸುಮಾರು 50 ರೈತರಿಗೆ ಹಸಿಕಸವನ್ನು ನೀಡುತ್ತಿದ್ದು, ಕಸ ವಿಲೇವಾರಿಗೆ ನಗರಸಭೆಗೆ ಸಹಕಾರಿಯಾಗಿದೆ. ನಗರದಲ್ಲಿನ ಎಸಿ ಕಚೇರಿ ಪಕ್ಕದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ವಾಣಿಜ್ಯ ಮಳಿಗೆ ನಿರ್ಮಾಣವಾಗುತ್ತಿದೆ ಎಂದರು.
ಕಾನೂನು ಕ್ರಮ : ನಗರದಲ್ಲಿ ಕಟ್ಟುವ ನೂತನ ಕಟ್ಟಡಗಳ ಶುಲ್ಕ ವಸೂಲಾತಿ ಸದ್ಯ 26 ಲಕ್ಷ ರೂಪಾಯಿ ಆಗಿದೆ. ಅಧಿಕೃತ ಕಟ್ಟಡಗಳ ನಿರ್ಮಾಣಕ್ಕೆ ನಗರಸಭೆಯಿಂದ ನೋಟಿಸ್ ನೀಡುವ ಮೂಲಕ ಕಾನೂನು ಕ್ರಮಕ್ಕೆ ಮುಂದಾಗುತ್ತಿದ್ದೇವೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಕುಮಾರ್ ಹೇಳಿದರು. 26 ಸಾವಿರ ಅಧಿಕೃತ ಖಾತೆ ಇದ್ದು, 6,000 ಖಾತೆಗಳನ್ನು ಲೋಕಾಯುಕ್ತಕ್ಕೆ ನೀಡುವ ಮೂಲಕ ರದ್ದುಗೊಳಿಸಿದ್ದೇವೆ. ದೊಡ್ಡಬಳ್ಳಾಪುರ ವ್ಯಾಪ್ತಿಯಲ್ಲಿ ನಗರಸಭೆಯಿಂದ 2,800 ಖಾತೆ ಮಾಡಲಾಗಿದೆ. ಒಂದೇ ಬಾರಿಗೆ 3000ಕ್ಕೂ ಅಧಿಕ ಅರ್ಜಿಗಳು ಬಂದ ಕಾರಣ ಖಾತಾ ಪ್ರಕ್ರಿಯೆ ಸಮಯ ತೆಗೆದುಕೊಂಡಿದೆ. ಪೌರಾಕಾರ್ಮಿಕರಿಗೆ ಸರ್ಕಾರಿ ಸವಲತ್ತು ಹೊರತುಪಡಿಸಿ ಹಲವು ಪೂರಕ ಕಾರ್ಯಕ್ರಮಗಳನ್ನು ಕಲ್ಪಿಸುವ ಮೂಲಕ ಪೌರಾಕಾರ್ಮಿಕರ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದರು.