ಜಿಲ್ಲೆ

ರಾಜ್ಯ ಸರ್ಕಾರದಿಂದ ಸರ್ವಾಧಿಕಾರಿ ಧೋರಣೆ

ಶಿವರಾಜ.ಎಂ

ಶಾಸಕ ಧೀರಜ್ ಮುನಿರಾಜು ಆರೋಪ

ಶಾಸಕರ ಅಮಾನತು ವಿರೋಧಿಸಿ ಪ್ರತಿಭಟನೆ


ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ವಿಧಾನಸಭೆಯಲ್ಲಿ ಬಿಜೆಪಿ ಶಾಸಕರನ್ನು ಅಮಾನತು ಮಾಡಿದ ನಿರ್ಧಾರವನ್ನು ಖಂಡಿಸ ನಗರದ ತಾಲೂಕು ಕಚೇರಿ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸ್ಪೀಕರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಧೀರಜ್ ಮುನಿರಾಜು ಮಾತನಾಡಿ, ಕಾಂಗ್ರೆಸ್ ಸರ್ಕಾರ ಕಾನೂನು ಬಾಹಿರವಾಗಿ ಬಿಜೆಪಿ ಶಾಸಕರನ್ನು ಅಮಾನತು ಮಾಡಿದೆ. ಸಿದ್ದರಾಮಯ್ಯ ಪ್ರತಿ ಪಕ್ಷದ ನಾಯಕರಾಗಿದ್ದಾಗ ಸದನದ ಒಳಗೆ ಪ್ರತಿಭಟನೆ ಮಾಡಿ, ವಿಧಾನಸೌಧದ ಬಾಗಿಲು ಒದಿದಿದ್ದರು. ಈಗ ಬಿಜೆಪಿ ಶಾಸಕರನ್ನು ಹೊರಗಿಟ್ಟು ಬಜೆಟ್ ಅನುಮೋದನೆ ಪಡೆದುಕೊಳ್ಳುವ ಮೂಲಕ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದದಾರೆ ಎಂದು ದೂರಿದರು.
ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಕಿಟ್ಟಿ ಮಾತನಾಡಿ, ಗಾಂಧಿ ಪ್ರತಿಮೆ ಮುಂದೆ ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಪ್ರತಿಭಟನೆ ಮಾಡಿದರೆ, ಗೋಡ್ಸೆ ಪ್ರತಿಮೆ ಮುಂದೆ ಪ್ರತಿಭಟಿಸಿ ಎಂದು ಸಿದ್ದರಾಮಯ್ಯ ಹೇಳುವುದು ಸಮಂಜಸವಲ್ಲ ಎಂದರು.
ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿದ ಗ್ಯಾರಂಟಿಗಳನ್ನು ಜನರಿಗೆ ಸಮರ್ಪಕವಾಗಿ ತಲುಪಿಸಿ ಎಂದರೆ ಬಿಜೆಪಿ ನಾಯಕರನ್ನು ಜನವಿರೋಧಿಗಳು ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ದೂರಿದರು.
ಶಾಸಕರು ತಾಲೂಕಿನ ಸಮಸ್ಯೆ ಬಗ್ಗೆ ವಿಧಾನಸಭೆಯಲ್ಲಿ ಪ್ರಶ್ನಿಸುವ ವೇಳೆ ಸ್ಪೀಕರ್ ಅವಕಾಶ ನೀಡಲಿಲ್ಲ. ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್, ಕಾಂಗ್ರೆಸ್ ಕೈಗೊಂಬೆಯಂತೆ ನಡೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಹಿಂದು ಕಾರ್ಯಕರ್ತರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದರು.
ಬಿಜೆಪಿಯ ಸರ್ಕಾರದಲ್ಲಿದ್ದ ಜನಪ್ರಿಯ 17 ಯೋಜನೆಗಳನ್ನು ರದ್ದು ಮಾಡಲಾಗಿದೆ. ಪಠ್ಯದಲ್ಲಿ ಭಗತ್ ಸಿಂಗ್ ರಂತಹ ಪಾಠಗಳನ್ನು ತೆಗೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡ ಗೋಪಿನಾಥ್ ಮಾತನಾಡಿ, ಬಿಜೆಪಿ ಶಾಸಕರನ್ನು ಅಮಾನತು ಮಾಡುವ ಮೂಲಕ ಕಾಂಗ್ರೆಸ್ ವಿಧಾನಸೌಧದಲ್ಲಿ ಗೂಂಡಾ ವರ್ತನೆ ಮಾಡಲು ಶುರುಮಾಡಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಲೇ ಕೋಮುಗಲಭೆ, ಕೊಲೆ ಪ್ರಕರಣ ಹೆಚ್ಚಾಗಿವೆ. ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸರ್ಕಾರ ಬಡ ಜನರನ್ನು ಈ ಮೂಲಕ ವಂಚಿಸುತ್ತಿದೆ. ಕಾಂಗ್ರೆಸ್ ಬಡವರ ಹಾಗೂ ರೈತರ ವಿರೋಧಿಯಾಗಿದೆ ಎಂದು ಟೀಕಿಸಿದರು.