ವೆಂಕಟರಾಜು ಎಸ್. ದೊಡ್ಡಬಳ್ಳಾಪುರ
ಜಿಲ್ಲೆಯಲ್ಲಿ ನಗರೀಕರಣದತ್ತ ವೇಗವಾಗಿ ಬೆಳೆಯುತ್ತಿರುವ ದೊಡ್ಡಬಳ್ಳಾಪುರ ಅಪಘಾತ ಪ್ರಕರಣಗಳಲ್ಲೂ ದಾಖಲೆ ನಿರ್ಮಿಸುತ್ತಿದೆ. ರಸ್ತೆ ಅಪಘಾತಗಳಲ್ಲಿ ಜೀವಕಳೆದುಕೊಳ್ಳುತ್ತಿರುವವರಿಗೆ ಲೆಕ್ಕವಿಲ್ಲದಂತಾಗಿದೆ. ವಾರದಲ್ಲೇ ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ 5 ಮಂದಿ ಮೃತಪಟ್ಟಿರುವುದು ತಾಲೂಕಿಗೆ ಅಪಘಾತಗಳ ಗ್ರಹಣ ಬಡಿದಿದೆಯೇನೋ ಎಂದು ತಾಲೂಕಿನ ಜನ ಆತಂಕ ವ್ಯಕ್ತಪಡಿಸಿದ್ದಾರೆ.
ತಂದೆ-ಮಗಳ ಸಾವು ಕರುಣಾಜನಕ ಆ.10ರಂದು ಮುದ್ದನಾಯಕನ ಪಾಳ್ಯದಿಂದ ನಗರದ ಶಾಲೆಗೆ ಬಿಡಲು ಮಗಳನ್ನು ಕರೆದುಕೊಂಡು ಹೊರಟಿದ್ದ ತಂದೆ ವೆಂಕಟೇಶ್ ಅವರಿಗೆ ಯಮಕಿಂಕರನಂತೆ ಎದುರಾದ ಲಾರಿ ಸ್ಥಳದಲ್ಲೇ ತಂದೆಯನ್ನು ಬಲಿ ತೆಗೆದುಕೊಂಡರೆ ಸಾವು ಬದುಕಿನ ನಡುವೆ ವಾರಗಟ್ಟಲೆ ಹೋರಾಟ ನಡೆಸಿದ ಮಗಳು ಕೊನೆಗೆ ಜವರಾಯ ಕೂಗಿಗೆ ಓಗೊಡಲೇಬೇಕಾದ ದುರಂತ ನಡೆದುಹೋಯಿತು. ಅಪಘಾತದಲ್ಲಿ ಮೃತಪಟ್ಟ ಬಾಲಕಿ ಯಶಸ್ವಿನಿ ಓದುತ್ತಿದ್ದ ಲಾವಣ್ಯಾ ವಿದ್ಯಾಸಂಸ್ಥೆ ಮಕ್ಕಳು ಸೇರಿ ಇಡೀ ತಾಲೂಕು ಜನತೆ ದೇವರಲ್ಲಿ ಪ್ರಾರ್ಥನೆ ಮಾಡಿದ್ದರು. ಆದರೆ ವಿಧಿಯಾಟ ಬಿಡಲಿಲ್ಲ. ಪತಿ, ಮಗಳನ್ನು ಕಳೆದುಕೊಂಡ ಪತ್ನಿಯ ಜೀವನ ನರಕ ಸದೃಶವಾಗಿದೆ.
ಮಾದರಿ ಜೀವನ ನಡೆಸುತ್ತಿದ್ದ ಲೇಖಕ ಯಲ್ಲಪ್ಪ ಸಾವು: ಸಂದರ್ಭದ ಒತ್ತಡಕ್ಕೆ ಸಿಲುಕಿ ಸಾಧನೆಗೈಯುವ 24ರ ವಯಸ್ಸಿನಲ್ಲಿ ಜೈಲು ಪಾಲದ ಯಲ್ಲಪ್ಪ ಬಿಡುಗಡೆಯಾಗಿದ್ದು 14 ವರ್ಷಗಳ ಬಳಿಕ, ಜೈಲಿನಲ್ಲಿದ್ದರೂ ಸಾಧನೆ ಬಿಡದ ಯಲ್ಲಪ್ಪ ಮೂರು ಡಿಗ್ರಿ ಪಡೆದು, ಬರಹಗಾರನಾಗಿ, ಸಂಶೋಧಕನಾಗಿ ರೂಪಗೊಂಡು ಮಾದರಿ ಪ್ರಜೆಯಾಗಿ ಹೊರ ಬಂದರು. ಹೊರಬರುವ ವೇಳೆಗೆ ‘ಜೈಲು ಜೀವಗಳು’ ಪುಸ್ತಕ ಬರೆದು ಖ್ಯಾತಿ ಪಡೆದಿದ್ದರು. ಪರಿಸರದ ಬಗ್ಗೆ ತೀವ್ರ ಆಸಕ್ತಿ ಹೊಂದಿದ್ದ ಯಲ್ಲಪ್ಪ ನಾಗರಕೆರೆ ಸ್ವಚ್ಛಗೊಳಿಸುವ, ಉಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡು ಸಮಾಜದಲ್ಲಿ ಮಾದರಿ ವ್ಯಕ್ತಿಯಾಗಿ ರೂಪಗೊಂಡಿದ್ದರು. ಯಲ್ಲಪ್ಪ ಆ.16ರಂದು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದು, ತಾಲೂಕಿನ ಜನತೆಗೆ ಬಹಳಷ್ಟು ನೋವುಂಟು ಮಾಡಿದೆ. ಪತ್ನಿ, ಪುಟ್ಟ ಮಗುವನ್ನು ಅಗಲಿರುವ ಯಲ್ಲಪ್ಪರ ಕುಟುಂಬಕ್ಕೆ ಆಸರೆ ಇಲ್ಲದಂತಾಗಿದೆ.
ಹಿಟ್ ಅಂಡ್ ರನ್‌ಗೆ ಓರ್ವ ಬಲಿ: ಹಾಡೋನಹಳ್ಳಿ ಗ್ರಾಮದ ದೇವರಾಜು ಎಂಬುವರು ಕೂಗಳತೆಯ ದೂರದಲ್ಲಿದ್ದ ಮನೆಗೆ ಹೋಗುವ ವೇಳೆ ವೇಗವಾಗಿ ಬಂದ ಕಾರು ಡಿಕ್ಕಿಯಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದರು. ಆ.15ರ ಸಂಜೆ ಕೆಲಸ ಮುಗಿಸಿ ತರಕಾರಿ ತಗೆದುಕೊಂಡು ಮನೆಗೆ ಬರುವ ಮಾರ್ಗದಲ್ಲಿ ಹಾಡೋನಹಳ್ಳಿ ಸರ್ಕಲ್‌ನಲ್ಲಿ ಘಾಟಿ ಕಡೆಯಿಂದ ಬಂದ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸ್ಥಳದಲ್ಲೇ ದೇವರಾಜ್ ಮೃತಪಟ್ಟಿದ್ದಾರೆ. ಮನೆ ಯಜಮಾನನ್ನು ಕಳೆದುಕೊಂಡಿರುವ ಪತ್ನಿ, ಮಗು ಅನಾಥವಾಗಿದ್ದಾರೆ. ಐದನೇಯದಾಗಿ ಪಾಲನಜೋಗಿಹಳ್ಳಿ ಸಮೀಪ ಬೆಳಗ್ಗಿನ ಜಾವದಲ್ಲಿ ಗೌರಿಬಿದನೂರಿನತ್ತ ಹೊರಡುವಾಗ ಬೈಕ್ ಡಿವೈಡರ್ ಗೆ ಡಿಕ್ಕಿಯಾಗಿ ಯುವಕನೊಬ್ಬ ಸಾವನ್ನಪ್ಪಿದ್ದಾನೆ.
ಗುಂಡಿಗಳನ್ನು ಮುಚ್ಚಿ, ಅಂಗಡಿಗಳ ತೆರವು ಮಾಡಿ: ಅಪಘಾತ ತಡೆಗಟ್ಟುವ ಸಲುವಾಗಿ ನಗರದ ಬಹುತೇಕ ಭಾಗದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ತಲೆ ಎತ್ತಿರುವ ಅನಧಿಕೃತ ಅಂಗಡಿಗಳ ತೆರವು ಮಾಡುವಂತೆ ಮತ್ತು ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಿ ಸುರಕ್ಷಿತ ಪ್ರಯಾಣಕ್ಕೆ ಅನುವು ಮಾಡಿಕೊಡುವಂತೆ ನಗರಸಭೆ, ಪೊಲೀಸ್ ಸೇರಿ ಸಂಬಂಧಪಟ್ಟ ಇಲಾಖೆಗಳಿಗೆ ಸಾರ್ವಜನಿಕರು ಆಗ್ರಹಿಸಿದ್ದಾರೆ.