ಮೈಸೂರು: ದಾಖಲೆಗಳು ಇತಿಹಾಸದ ಮೂಲಾಧಾರಗಳಾಗಿವೆ. ದಾಖಲೆಗಳು ನಾಡಿನ ಅಬಿವೃದ್ಧಿಗೆ ಪೂರಕ, ಸಾಂಸ್ಕೃತಿಕ ಪ್ರತಿಬಿಂಬ, ದಾಖಲೆಗಳ ಸಂರಕ್ಷಣೆ ನಮ್ಮಲ್ಲರ ಹೊಣೆಯಾಗಿರುತ್ತದೆ ಎಂದು ಪತ್ರಾಗಾರ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಚ್.ಎಲ್.ಮಂಜುನಾಥ ತಿಳಿಸಿದರು.
ಅಂತಾರಾಷ್ಟ್ರೀಯ ಪತ್ರಾಗಾರ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ಅರಿವು ವಿದ್ಯಾಸಂಸ್ಥೆಯ ಸಹಯೋಗದೊಂದಿಗೆ ನಗರದ ವಿಭಾಗೀಯ ಪತ್ರಾಗಾರ ಕಚೇರಿಯಲ್ಲಿ ದಾಖಲೆಗಳ ಮಹತ್ವದ ಕುರಿತು ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ದಾಖಲೆಗಳ ಸಂರಕ್ಷಣೆಗಾಗಿ ರಾಜ್ಯದಲ್ಲಿ 1973ರಲ್ಲಿ ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ ಸ್ಥಾಪನೆಯಾಗಿದೆ. ಪತ್ರಾಗಾರ ಇಲಾಖೆಯು 200 ವರ್ಷಗಳಿಗೂ ಹಳೇ ಐತಿಹಾಸಿಕ ನಾಡಿನ ದಾಖಲೆಗಳನ್ನು ಸಂರಕ್ಷಿಸಿ ದಾಖಲೆಗಳ ಸೇವಾ ಕಾರ್ಯವನ್ನು ಒದಗಿಸುತ್ತಿದೆ ಎಂದು ಹೇಳಿದರು.
ಮೈಸೂರಿನ ವಿಭಾಗೀಯ ಪತ್ರಾಗಾರ ಕಚೇರಿಯಲ್ಲಿ ಸಾರ್ವಜನಿಕರ, ಸಂಶೋಧಕರ, ಸರ್ಕಾರಿ ಇಲಾಖೆಗಳಿಗೆ ಉಪಯೋಗಕ್ಕಾಗಿ ಪ್ರಕಟಿತ, ಅಪ್ರಕಟಿತ, ಕಡತಗಳು ಮತ್ತು ಖಾಸಗಿ ದಾಖಲೆಗಳನ್ನು ಸಂಗ್ರಹಿಸಿ ಮಾಹಿತಿ ಒದಗಿಸುವ ಕೆಲಸ ಮಾಡುತ್ತಿದೆ. ಅದರಲ್ಲಿ ಕಡತಗಳು, ನಡವಳಿಗಳು, ಆದೇಶಗಳು, ವಾರ್ಷಿಕ ವರದಿಗಳು, ಭಾಷಣಗಳು, ನಕ್ಷೆಗಳು, ಕಾಗದ ಪತ್ರಗಳು, ಛಾಯಾಚಿತ್ರಗಳು, ದಿನಪತ್ರಿಕೆಗಳು, ಧ್ವನಿ ಸಂಗ್ರಹ, ದಾಖಲೆಗಳ ರೂಪದಲ್ಲಿ ದಾಖಲೆಗಳಿರುತ್ತವೆ ಎಂದರು.
ಈ ದಾಖಲೆಗಳು ಕರ್ನಾಟಕದ ಇತಿಹಾಸ, ಮೈಸೂರು ಸಂಸ್ಥಾನದ ಇತಿಹಾಸ, ಕರ್ನಾಟಕ ಏಕೀಕರಣ ಚಳವಳಿ, ಸ್ವಾತಂತ್ರ್ಯ ಹೋರಾಟ ಕುರಿತ ದಾಖಲೆಗಳು, ಮೈಸೂರು ಅಥವಾ ಕರ್ನಾಟಕ ಆಡಳಿತಾತ್ಮಕ ಮಾಹಿತಿಗಳು, ನಾಡಿನ ಅಭಿವೃದ್ಧಿಗಾಗಿ ಎಲ್ಲ ಆಯಾಮಗಳಲ್ಲಿ ಸಂಶೋಧಿಸಿ ತಯಾರಿಸಿದ ವರದಿಗಳು, ಪ್ರಜೆಗಳ ಹಿತಕ್ಕಾಗಿ ಸ್ಥಾಪನೆಯಾದ ಪ್ರಜಾಪ್ರತಿನಿದಿ ಸಭೆಯ ನಡವಳಿಗಳು, ಮೈಸೂರು ಅರಮನೆ ಆಡಳಿತಕ್ಕೆ ಸಂಬಂಧಿಸಿದಂತೆ ಕಡತಗಳು, ಮೈಸೂರು ಸರ್ಕಾರದ ನಡವಳಿಗಳು, ನೇಮಕಾತಿಗಳು, ವರ್ಗಾವಣೆ,
ನ್ಯಾಯಾಲಯದ ಅಧಿಸೂಚನೆಗಳು, ಅರಣ್ಯ ಇಲಾಖೆಯ ಅಧಿಸೂಚನೆಗಳು, ಭೂಸ್ವಾದೀನ, ಜಮೀನು ಮುಂತಾದ ಕಂದಾಯ ವಿಷಯಗಳು, ಸರ್ಕಾರದ ಪರಿಶೀಲನಾ ವರದಿಗಳು, ಸ್ಥಳೀಯ ಆದೇಶಗಳು, ಅಂದಿನ ಮದ್ರಾಸ್ ಪ್ರಾಂತ್ಯದ ನಡವಳಿಗಳು ಮತ್ತು ಆದೇಶಗಳು, ದಿವಾನ್ ಪೂರ್ಣಯ್ಯನವರ ಆಡಳಿತ ಅವಧಿಗೆ ಸಂಬಂಧಿಸಿದ ಕಡತಗಳು(ಬ್ಲಾಕ್ ಬುಕ್) ಹಾಗೂ ನಾಡು ನುಡಿಗೆ ಶ್ರಮಿಸಿದ ಗಣ್ಯ ವ್ಯಕ್ತಿಗಳ ನೆನಪಿನ ಅನುಭವದ ಧ್ವನಿ ಸಂಗ್ರಹ ದಾಖಲೆಗಳನ್ನು ಸಂರಕ್ಷಿಸಿಲಾಗಿದೆ ಎಂದರು.
ಸುಮಾರು 1860 ರಿಂದ 2019 ರವರೆಗೆ ವಿವಿದ ದಾಖಲೆಗಳನ್ನು ಸಂರಕ್ಷಿಸಲಾಗಿದೆ. ಪ್ರಸ್ತುತ ಸುಮಾರು 1.30 ಕೋಟಿ ದಾಖಲೆಗಳನ್ನು ಡಿಜಿಟಲೀಕರಣ ಮಾಡಿ ಇಲಾಖೆಯ ಡಿಡಿಡಿ.ಚ್ಞ್ಞಜ್ಟಿಜಿ.ಚ್ಟ.್ಞಜ್ಚಿ.ಜ್ಞಿ ವೆಬ್‌ಸೈಟ್‌ನಲ್ಲಿ ಅಳವಡಿಸಲಾಗಿದ್ದು, ದಾಖಲೆ ವೀಕ್ಷಣೆ ಮಾಡ ಬಹುದಾಗಿದೆ ಎಂದು ಮಾಹಿತಿ ನೀಡಿದರು.
ದಾಖಲೆಗಳ ಸಂರಕ್ಷಣೆ ಮತ್ತು ನಿರ್ವಹಣೆ ಬಹಳ ಅತ್ಯಮೂಲ್ಯವಾಗಿರುವುದರಿಂದ ಸಾರ್ವಜನಿಕ ದಾಖಲೆಗಳ ಅಧಿನಿಯಮ ಕಾಯ್ದೆ 2013 ಅನ್ನು ಕರ್ನಾಟಕ ಸರ್ಕಾರ ಜಾರಿಗೆ ತಂದಿದೆ. ಈ ಅಧಿನಿಯಮದಲ್ಲಿ ದಾಖಲೆಗಳ ಸಂರಕ್ಷಣೆ ಬಗ್ಗೆ ದಾಖಲೆಗಳ ವರ್ಗೀಕರಣದ ಬಗ್ಗೆ ದಾಖಲೆಗಳ ನಾಶದ ಬಗ್ಗೆ ಉಲ್ಲೇಖಿಸಲಾಗಿದೆ. ದಾಖಲೆಗಳ ಮೌಲ್ಯ ನಿರ್ಧರಿಸಿ ದಾಖಲೆ ಎ.ಬಿ.ಸಿ.ಡಿ ಎಂಬ ನಾಲ್ಕು ವರ್ಗಗಳಾಗಿ ವಿಂಗಡಿಸಲಾಗಿದೆ. ಕಡ್ಡಾಯವಾಗಿ ಎಲ್ಲ ಸರ್ಕಾರಿ ಕಚೇರಿಗಳಲ್ಲಿಯೂ ಈ ಕಾಯ್ದೆಯನ್ವಯ ದಾಖಲೆಗಳ ನಿರ್ವಹಣೆ ಮಾಡಲು ಉಲ್ಲೇಖಿಸಲಾಗಿರುತ್ತದೆ ಎಂದರು.
ಅರಿವು ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಸಿ.ಎಸ್.ಜನಾರ್ದನ ಮಾತನಾಡಿ, ಶಾಲಾ ಮಕ್ಕಳಿಗೆ ಇತಿಹಾಸವನ್ನು ಅರಿಯಲು ಪತ್ರಾಗಾರದ ದಾಖಲೆ ನೋಡಬೇಕು. ಇಲಾಖೆಯಲ್ಲಿರುವ ದಾಖಲೆಗಳು ಐತಿಹಾಸಿಕ ಮಹತ್ವದ ದಾಖಲೆಗಳಾಗಿರುತ್ತವೆ. ಶಾಲಾ ಹಂತದಿಂದಲೆ ದಾಖಲೆಗಳನ್ನು ನೋಡಲು ಸಂರಕ್ಷಿಸಲು ಮುಂದಾಗಬೇಕು ಎಂದು ತಿಳಿಸಿದರು.
ಮಹಾರಾಜ ಕಾಲೇಜಿನ ಪ್ರಾಧ್ಯಾಪಕ ಡಾ. ಪವಮಾನ ಮಾತನಾಡಿ, ಪತ್ರಾಗಾರ ಇಲಾಖೆಯಲ್ಲಿರುವ ದಾಖಲೆಗಳು ಐತಿಹಾಸಿಕ ಮಹತ್ವದ್ದಾಗಿರುತ್ತದೆ. ಪ್ರಾಥಮಿಕ ಆಕರಗಳಾಗಿ ಸಂಶೋಧಕರು ಇವುಗಳನ್ನು ಬಳಸಬಹುದಾಗಿರುತ್ತದೆ. ಇತಿಹಾಸದ ನೈಜತೆ ಪರಿಶೀಲನೆಗೆ ಈ ದಾಖಲೆಗಳು ಸಹಕಾರವಾಗಿವೆ.
ಗಾಂಧೀಜಿಯವರು ಕರ್ನಾಟಕಕ್ಕೆ ಭೇಟಿ ನೀಡಿದ ದಾಖಲೆಗಳು ಪತ್ರಾಗಾರದಲ್ಲಿವೆ. ಖಾಸಗಿ ಪತ್ರಿಕೆಗಳಿಂದ ಹಿಂದಿನ ಕಾಲದ ಐತಿಹಾಸಿಕ ಘಟನೆಗಳನ್ನು ಪತ್ರಗಾರದಲ್ಲಿರುವ ಪತ್ರಿಕೆಗಳಲ್ಲಿ ಓದಿ ತಿಳಿಯಬಹುದಾಗಿರುತ್ತದೆ. ಗಣಕೀಕರಣ ಮತ್ತು ಮೈಕ್ರೋ ಫಿಲ್ಮ್ ಮಾಡಿರುವ ದಾಖಲೆ ಸುಲಭವಾಗಿ ವೀಕ್ಷಿಸಬಹುದಾಗಿರುತ್ತದೆ ಎಂದು ತಿಳಿಸಿದರು.
ಪತ್ರಾಗಾರ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಪರೀಕ್ಷಿತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.