ಜಿಲ್ಲೆ

ದಾಖಲೆ ಪರಿಶೀಲನೆ ಕಾರ್ಯಕ್ಕೆ ಚಾಲನೆ

ವೀರೇಶ ಸೌದ್ರಿ

ವಿಜಯವಾಣಿ ಸುದ್ದಿಜಾಲ ಕುಮಟಾ

ಅರಣ್ಯ ಭೂಮಿ ಹಕ್ಕು ನೀಡುವ ಸಂಬಂಧ ರಾಜ್ಯ ಅರಣ್ಯ ಭೂಮಿ ಹಕ್ಕು ಪರಿಶೀಲನೆ ಸಮಿತಿಯು 60 ದಿನಗಳೊಳಗೆ ದಾಖಲೆಗಳನ್ನು ಪರಿಶೀಲಿಸುವಂತೆ ಸರ್ಕಾರ ನಿರ್ದೇಶನ ನೀಡಿದ್ದು, ದಾಖಲೆ ಪರಿಶೀಲನೆ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದೆ ಎಂದು ಅರಣ್ಯ ಹಕ್ಕು ಹೋರಾಟ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.

ಪಟ್ಟಣದ ಮಾಸ್ತಿಕಟ್ಟಾ ದೇವಸ್ಥಾನ ಸಂಭಾಗಣದಲ್ಲಿ ಮಂಗಳವಾರ ತಾಲೂಕು ಅರಣ್ಯವಾಸಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಅರಣ್ಯ ಭೂಮಿಯಲ್ಲಿ ವಾಸ್ತವ್ಯ ಮತ್ತು ಸಾಗುವಳಿ ಅತಿಕ್ರಮಣ ಪ್ರದೇಶದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕೆಂಬ ಅರಣ್ಯ ಇಲಾಖೆಯ ನೀತಿ ಮತ್ತು ಮಾನದಂಡ ಸಮಂಜಸವಲ್ಲ. ಅರಣ್ಯ ಇಲಾಖೆಯ ಈ ನೀತಿಯಿಂದ ಅರಣ್ಯವಾಸಿ ಅತಿಕ್ರಮಣದಾರರಿಗೆ ಜಮೀನು ಸಾಗುವಳಿಗೆ ಆತಂಕ ಉಂಟಾಗುತ್ತದೆ. ಅರಣ್ಯ ಹಕ್ಕು ಕಾಯ್ದೆ ಅಡಿ ಅರಣ್ಯವಾಸಿಯು ಸಲ್ಲಿಸಿದ ಅರ್ಜಿ ಮಂಜೂರಿ ಪ್ರಕ್ರಿಯೆಯಲ್ಲಿ ಇರುವಂತಹ ಕ್ಷೇತ್ರದಲ್ಲಿ ಅವಶ್ಯ ಸಾಗುವಳಿ ಮತ್ತು ಅಭಿವೃದ್ಧಿ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಹಸ್ತಕ್ಷೇಪ ಮಾಡಲು ಬರಲಾರದು. ಅರಣ್ಯ ಹಕ್ಕು ಕಾಯ್ದೆಯು ದೇಶದಲ್ಲಿ ಪರಮೋಚ್ಚ ಕಾಯ್ದೆ ಆಗಿರುವುದರಿಂದ ಇನ್ನುಳಿದ ಕಾಯ್ದೆಯಲ್ಲಿರುವ ಅಂಶ ಗಣನೆಗೆ ಬರಲಾರದು ಎಂದರು.

ಜಿಲ್ಲಾ ಸಂಚಾಲಕ ಮಹೇಂದ್ರ ನಾಯ್ಕ, ಸೀತಾರಾಮ ನಾಯ್ಕ, ಜಗದೀಶ ಹರಿಕಂತ್ರ, ಸಾರಂಬಿ ಶೇಕ್, ಗಜಾನನ ಪಟಗಾರ, ಶಂಕರ ಕಂದಳ್ಳಿ ಮಾತನಾಡಿದರು.

ಹೋರಾಟ ವೇದಿಕೆ ತಾಲೂಕಾಧ್ಯಕ್ಷ ಮಂಜುನಾಥ ಮರಾಠಿ ನಾಗೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಯಾಕೂಬ್ ಬೆಟ್ಕುಳಿ, ರಾಜು ಗೌಡ ಅಳಕೋಡ, ಜ್ಯೋತಿ ದಯಾನಂದ ಗಾವಡಿ, ಮುಜಾಫರ್ ಅಬ್ದುಲ ಕರೀಮ ಸಾಬ, ಯೋಗೇಂದ್ರ ಗೌಡ, ಗೀತಾ ನಾಯ್ಕ ಕರ್ಕಿಮಕ್ಕಿ, ಗಣಪತಿ ಮರಾಠಿ, ಇತರರು ಇದ್ದರು.