ಮಂಡ್ಯ: ರೈತರು ತಮ್ಮ ಭೂಮಿ ದಾಖಲೆಗಳನ್ನು ಕಳೆದುಕೊಂಡು ಮತ್ತೆ ಪಡೆಯಲು ತಹಸೀಲ್ದಾರ್ ಕಚೇರಿ ತಿಂಗಳುಗಟ್ಟಲೆ ತಿರುಗಿದರೂ ದಾಖಲಾತಿ ದೊರೆಯುತ್ತಿರಲಿಲ್ಲ. 40 ರಿಂದ 50 ವರ್ಷದ ಹಳೆಯ ಭೂ ದಾಖಲೆಗಳ ಪತ್ರದ ಕಾಗದ ಹಳೆಯದಾಗಿ ಹರಿದುಹೋಗಿ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿತ್ತು. ಇದನ್ನು ಚಿಂತಿಸಿ ದಾಖಲೆಗಳನ್ನು ಡಿಜಿಟಲೀಕರಣ ಮಾಡುವುದರಿಂದ ರೈತರು ಹಾಗೂ ಸಾರ್ವಜನಿಕರಿಗೆ ಅವರಿಗೆ ಬೇಕಾದ ಸಮಯದಲ್ಲಿ ದಾಖಲೆಗಳನ್ನು ಪಡೆಯಬಹುದು ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.
ನಗರದ ತಾಲೂಕು ಕಚೇರಿಯಲ್ಲಿ ರೆಕಾರ್ಡ್ ರೂಂ, ಸರ್ವೇ ದಾಖಲೆಗಳ ಡಿಜಿಟಲೀಕರಣ ಭೂ ಸುರಕ್ಷಾ ಯೋಜನೆಗೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ರೈತರಿಗೆ ಸಮಸ್ಯೆಗಳನ್ನು ಪರಿಹರಿಸಲು ಕಂದಾಯ ಇಲಾಖೆಯಲ್ಲಿ ಡಿಜಿಟಲೀಕರಣ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ, ಇಲ್ಲಿಯ ತನಕ ಕಂದಾಯ ಇಲಾಖೆಯಲ್ಲಿ ನೋಂದಣಿ ಆಗಿರುವ ಎಲ್ಲ ಭೂಮಿ ದಾಖಲಾತಿಗಳನ್ನು ಸ್ಕಾೃನ್ ಮಾಡಿ ಸಂಗ್ರಹಿಸುವ ಯೋಜನೆ ಇದಾಗಿದೆ. ಭೂಸುರಕ್ಷಾ ಎಂಬ ಆ್ಯಪ್‌ನಲ್ಲಿ ಭೂ ದಾಖಲೆಯ ಸಂಖ್ಯೆಯನ್ನು ನೀಡಿದರೆ ಸಾಕು. ಒಂದು ನಿಮಿಷದಲ್ಲಿ ಭೂ ದಾಖಲಾತಿ ಪತ್ರಗಳನ್ನು ನೀಡುವ ಕ್ರಾಂತಿಕಾರಿ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ ಎಂದರು.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಈ ಯೋಜನೆ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ. ಶೀಥಲೀಕರಣಗೊಂಡ ಭೂಮಿ ದಾಖಲಾತಿಗಳು ಕಳೆದು ಹೋದ ಭೂಮಿ ದಾಖಲೆಗಳು ರೈತರಿಗೆ ಅನುಕೂಲವಾಗುವಂತೆ ಹಾಗೂ ಯಾವುದೇ ದಾಖಲಾತಿಗಳನ್ನು ಯಾರು ತಿದ್ದಲು ಅಥವಾ ಕಳುವು ಮಾಡಲು ಅವಕಾಶವಿರುವುದಿಲ್ಲ. ಪಾಂಡವಪುರ ತಾಲೂಕಿನ ದಾಖಲೆಗಳ ಡಿಜಟಲೀಕರಣ ಕೆಲಸ ಈಗಾಗಲೇ ಪ್ರಾರಂಭಿಸಿದ್ದು, 56 ಲಕ್ಷಕ್ಕೂ ಹೆಚ್ಚು ದಾಖಲಾತಿ ಪತ್ರಗಳನ್ನು ಸ್ಕಾೃನ್ ಮಾಡಲಾಗಿದೆ. ಮಂಡ್ಯ ತಾಲೂಕಿನಲ್ಲಿ 90 ಸಾವಿರ ಕಡತ ಹಾಗೂ 45 ಲಕ್ಷಕ್ಕೂ ಹೆಚ್ಚು ದಾಖಲಾತಿ ಪತ್ರಗಳಿವೆ. ಮುಂದಿನ ಒಂದು ವರ್ಷದೊಳಗೆ ಎಲ್ಲವನ್ನೂ ಸ್ಕಾೃನ್ ಮಾಡಿ ಡಿಜಿಟಲೀಕರಣ ಮಾಡಲಾಗುವುದು ಎಂದು ತಿಳಿಸಿದರು.
ಮಂಡ್ಯ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ತಹಸೀಲ್ದಾರ್ ಡಾ.ಶಿವಕುಮಾರ ಬಿರಾದರ್ ಇತರರಿದ್ದರು.