ಬಾಗಲಕೋಟೆಯ ಬಿವಿವಿ ಸಂಘದ ಹೋಮಿಯೋಪಥಿಕ್ ವೈದ್ಯಕೀಯ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಎಸ್.ಎನ್.ಮಡಿಕಲ್ ಕಾಲೇಜಿನ ನೂತನ ಪ್ರಚಾರ್ಯರಾದ ಡಾ.ಭುವನೇಶ್ವರಿ ಯಳಮೇಲಿ ಅವರನ್ನು ಸನ್ಮಾನಿಸಲಾಯಿತು. ಬಿವಿವಿ ಸಂಘದ ಕಾಲೇಜು ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಸಾಸನೂರ, ಡಾ.ರವಿ ಕೋಟೆಂಣ್ಣವರ, ಡಾ.ಅಮರೇಶ ಬಳಗಾನೂರ.ಡಾ.ವಿಜಯಲಕ್ಷ್ಮೀ ಪಾಟೀಲ. ಡಾ.ರುದ್ರೇಶ ಕೊಪ್ಪಳ ಮತ್ತಿತರರು ಇದ್ದರು. 
ಜಿಲ್ಲೆ

ಚಿಕಿತ್ಸೆಯ ಜೊತೆ ರೋಗ ತಡೆಗಟ್ಟುವ ವೈದ್ಯರು ಆದರ್ಶ

ಬಾಗಲಕೋಟೆ : ರೋಗ ಕಾಣಿಸಿಕೊಂಡ ಬಳಿಕ ಅದಕ್ಕೆ ಚಿಕಿತ್ಸೆ ನೀಡುವುದರ ಜೊತೆಗೆ ರೋಗ ತಡಗಟ್ಟುವ ವೈದ್ಯರು ಆದರ್ಶ ಡಾಕ್ಟರ್ ಗಳು ಎಂದು ಎಸ್.ಎನ್.ವೈದ್ಯಕೀಯ ಮಹಾವಿದ್ಯಾಲಯಕ್ಕೆ ನೂತನ ಪ್ರಾಚಾರ್ಯರಾಗಿ ನೇಮಕವಾಗಿ ಸನ್ಮಾನ ಸ್ವೀಕರಿಸಿದ ಡಾ.ಭುವನೇಶ್ವರಿ ಯಳಮೇಲಿ ಹೇಳಿದರು.
ನಗರದ ಬಿವಿವಿ ಸಂಘದ ಹೋಮಿಯೋಪಥಿಕ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚಾರಣೆ ಪ್ರಯುಕ್ತ ಮಂಗಳವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವೈದ್ಯರು ಭೂಮಿಯ ಮೇಲಿನ ದೇವರು, ಎಂಬ ಸ್ಥಾನವನ್ನು ನಾವು ಶ್ರದ್ಧೆ, ತಾಳ್ಮೆ, ಕರುಣೆಗಳಿಂದ ಉಳಿಸಿಕೊಂಡು ಹೋಗಬೇಕಾಗಿದೆ. ವೈದ್ಯ ವೃತ್ತಿ ಗೌರವಯುತವಾದದ್ದು, ಆದರ್ಶ ವೈದ್ಯರು ರೋಗದ ಚಿಕಿತ್ಸೆಗಿಂತ ರೋಗ ತಡೆಗಟ್ಟುವಿಕೆಗೆ ಗಮನ ನೀಡುತ್ತಾರೆ. ವೈದ್ಯ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದ ಮಾಹಿತಿಯನ್ನು ಅವಲಂಬಿಸದೇ ಪುಸ್ತಕಗಳನ್ನು ಓದಿ, ವೈದ್ಯ ಉಪನ್ಯಾಸಕರಿಂದ ಆಸ್ಪತ್ರೆಯಲ್ಲಿ ಮಾಹಿತಿ ಸಂಗ್ರಹಿಸಿ ಜ್ಞಾನ ವೃದ್ಧಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದ ಅವರು, ವೈದ್ಯಕೀಯ ವೃತ್ತಿಯಲ್ಲಿ ಇರುವವರಿಗೆ ಭಾರತ ರತ್ನ ಡಾ.ಬಿ.ಸಿ.ರಾಯ್ ರವರ ಸೇವಾ ಮನೋಭಾವನೆ ದಾರಿದೀಪವಾಗಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಸಾಸನೂರ ಮಾತನಾಡಿ, ವೈದ್ಯರು ದೇವರಲ್ಲ, ದೇವರ ಪ್ರತಿನಿಧಿಗಳು. ಜನರ ಆರೋಗ್ಯ ಕಾಪಾಡಿ ಆರೈಕೆ ಮೂಲಕ ಜೀವ ಉಳಿಸುವ ಕೆಲಸ ಮಾಡಬೆಕು ಎಂದರು.

ಪ್ರಾಚಾರ್ಯ ಡಾ.ಅರುಣ ಹೂಲಿ ಮಾತನಾಡಿ, ವೈದ್ಯ ವೃತ್ತಿ ಶ್ರೇಷ್ಠವಾದದ್ದು, ವೈದ್ಯರಾದವರಿಗೆ ಸಮರ್ಪಣೆ ತ್ಯಾಗ, ಸನ್ನಡತೆ , ಸಮಯ ಪ್ರಜ್ಞೆ ಅತ್ಯವಶ್ಯ. ಸೇವೆಯಲ್ಲಿ ಈ ಭಾಗದ ಜನರಿಗೆ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ ಗುಣಮಟ್ಟದ ವೈದ್ಯಕೀಯ ಸೇವೆಯಿಂದ ರೋಗಿಗಳಿಗೆ ಸಂಜೀವಿನಿಯಾಗಿದೆ. ಈ ನಿಟ್ಟಿನಲ್ಲಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಅವರ ಕೊಡುಗೆ ಅಪಾರ ಹಾಗೂ ಶ್ಲಾಘನೀಯ ಎಂದು ಬಣ್ಣಿಸಿದರು.

ವೈದ್ಯ ವಿದ್ಯಾರ್ಥಿನಿ ಅನ್ನಪೂರ್ಣ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಅಂಬಿಕಾ ಅವಟಿ ಸ್ವಾಗತಿಸಿದರು. ಶ್ವೇತಾ ಸಜ್ಜನ ಪರಿಚಯಿಸಿದರು, ಯರ‌್ರಾ ಪಾವನಿ ವಂದಿಸಿದರು. ತನ್ವಿ ನುಗ್ಗಾನಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪ್ರಾಧ್ಯಾಪಕರಾದ ಡಾ.ರವಿ ಕೋಟೆಣ್ಣವರ. ಡಾ.ಅಮರೇಶ ಬಳಗಾನೂರ.ಡಾ.ವಿಜಯಲಕ್ಷ್ಮೀ ಪಾಟೀಲ. ಡಾ.ರುದ್ರೇಶ ಕೊಪ್ಪಳ. ಡಾ.ವಿಜಯಲಕ್ಷ್ಮೀ ಪೂಜಾರ. ಡಾ.ಪ್ರದೀಪ ಕೆ.ಎಸ್. ಉಪಸ್ಥಿತರಿದ್ದರು.