ಜಿಲ್ಲೆ

ವೈದ್ಯರ ವರ್ಗಾವಣೆ ತಡೆ ಹಿಡಿಯಿರಿ

Uttara Kannada - Subash Hegde
ಯಲ್ಲಾಪುರ: ಇಲ್ಲಿನ ತಾಲೂಕು ಆಸ್ಪತ್ರೆಯ ವೈದ್ಯರಾದ ಡಾ.ದೀಪಕ ಭಟ್ಟ ಹಾಗೂ ಡಾ.ಸೌಮ್ಯಾ ಕೆವಿ ಅವರನ್ನು ವರ್ಗಾವಣೆ ಮಾಡುವ ಸಿದ್ಧತೆ ನಡೆದಿದ್ದು, ಅದನ್ನು ತಡೆಹಿಡಿಯಬೇಕು ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಆಗ್ರಹಿಸಿದರು.
     ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಟ್ಟಣದ ತಾಲೂಕು ಆಸ್ಪತ್ರೆ ರೋಗಿಗಳಿಗೆ ಉತ್ತಮ ಸೇವೆ ನೀಡುತ್ತ ರಾಜ್ಯದ ಗಮನ ಸೆಳೆದಿದೆ. ಆಸ್ಪತ್ರೆ ಉತ್ತಮ ಹೆಸರು ಗಳಿಸುವಲ್ಲಿ ವೈದ್ಯರಾದ ದೀಪಕ ಹಾಗೂ ಸೌಮ್ಯಾ ಅವರ ಶ್ರಮ ಕಾರಣವಾಗಿದೆ. ಸರ್ಕಾರಿ ಆಸ್ಪತ್ರೆಗೆ ಬರುವ ಬಡವರಿಗೆ ಯಾವುದೇ ಸಮಯದಲ್ಲಿ ಉತ್ತಮ ಚಿಕಿತ್ಸೆ ನೀಡುವ ಮೂಲಕ ತಾಲೂಕಿನ ಬಡವರ ಕಣ್ಮಣಿಗಳಾಗಿದ್ದಾರೆ. ಇಂತಹ ವೈದ್ಯರನ್ನು ಯಾವುದೇ ಕಾರಣಕ್ಕೂ ವರ್ಗಾವಣೆ ಮಾಡಬಾರದೆಂದು ಒತ್ತಾಯಿಸಿದರು.
ವರ್ಗಾವಸೆಗೆ ಸಿದ್ಧತೆ ನಡೆದಿರುವ ವಿಚಾರ ಶಾಸಕರ ಗಮನಕ್ಕೆ ಬಂದಿದೆಯೊ ಅಥವಾ ಇಲ್ಲವೊ ತಿಳಿದಿಲ್ಲ. ತಾಲೂಕಿನ ಬಡ ಜನರ ಆರೋಗ್ಯದ ಸಲುವಾಗಿ ಈ ವರ್ಗಾವಣೆಯನ್ನು ಶಾಸಕರು ತಡೆಯಬೇಕು ಎಂದು ಅವರು ಆಗ್ರಹಿಸಿದರು.
ಒಂದು ವೇಳೆ ವರ್ಗಾವಣೆಯಾದಲ್ಲಿ ತಾಲೂಕಿನ ಜನರೆಲ್ಲರ ಧ್ವನಿಯಾಗಿ ಬಿಜೆಪಿ ಹೋರಾಟ ಕೈಗೊಳ್ಳಲಿದೆ. ಅಹೋರಾತ್ರಿ ಧರಣಿ, ಉಪವಾಸ ಸತ್ಯಾಗ್ರಹದಂತಹ ಉಗ್ರ ಹೋರಾಟಕ್ಕೆ ಬಿಜೆಪಿ ಮುಂದಾಗಲಿದೆ ಎಂದು ಎಚ್ಚರಿಸಿದರು.ಬಿಜೆಪಿಯ ಜಿಲ್ಲಾ ಪ್ರಶಿಕ್ಷಣ ಪ್ರಮುಖ ಗಣಪತಿ ಮಾನಿಗದ್ದೆ, ಮಂಡಲ ಅಧ್ಯಕ್ಷ ಪ್ರಸಾದ ಹೆಗಡೆ, ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸೋಮೇಶ್ವರ ನಾಯ್ಕ ಇದ್ದರು.