ಮೈಸೂರು: ವೈದ್ಯ ದಿನಾಚರಣೆ ಅಂಗವಾಗಿ ಜೀವಧಾರ ರಕ್ತ ನಿಧಿ ಕೇಂದ್ರದಿಂದ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ‘ವೈದ್ಯೋ ನಾರಾಯಣ ಹರಿ’ ಪ್ರಶಸ್ತಿ ನೀಡಲಾಯಿತು.
ವೈದ್ಯರಾದ ಡಾ.ಪ್ರಶಾಂತ್ ರಾಮ್, ಡಾ.ಎನ್.ಉಷಾ, ಡಾ.ರಕ್ಷಿತಾ, ಡಾ.ಅವಿನಾಶ್, ಡಾ.ಆರ್.ಎನ್.ಸುರೇಶ್, ಡಾ.ಸ್ವಾಮಿ, ಡಾ.ಪೂರ್ಣಿಮಾ, ಡಾ.ಪ್ರಕಾಶ್ ಕೆ.ಪ್ರಭು, ಡಾ.ಎಚ್.ಎಲ್.ಪ್ರಸಾದ್ ಅವರಿಗೆ ಪ್ರದಾನ ಮಾಡಲಾಯಿತು. ಬಳಿಕ ಮಾತನಾಡಿದ ನಿವೃತ್ತ ತಹಸೀಲ್ದಾರ್, ಲೇಖಕ ಡಾ.ವಿ.ರಂಗನಾಥ್ ಅವರು, ವೈದ್ಯ ಕೆಲಸ ಪವಿತ್ರ ವೃತ್ತಿಯಾಗಿದೆ. ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವುದರ ಜತೆಗೆ ವೃತ್ತಿ ಪಾವಿತ್ರತೆಯನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ವೈದ್ಯರ ಮೇಲಿದೆ ಎಂದು ಹೇಳಿದರು.
ವೃತ್ತಿಯಲ್ಲಿ ಯಾವುದೇ ರೋಗಿಗೂ ಮೋಸ ಮಾಡುವುದಿಲ್ಲ ಎಂಬ ಪ್ರತಿಜ್ಞೆಯನ್ನು ಪಾಲನೆ ಮಾಡಬೇಕು. ವೃತ್ತಿ ಜೀವನದುದ್ದಕ್ಕೂ ಸೇವಾ ಮನೋಭಾದ ಜತೆಗೆ ಪರಿಣತಿ, ಕೌಶಲತೆ ಮತ್ತು ಅನುಕರಣೆ ಇರಬೇಕು. ಅಂದಾಗ ಮಾತ್ರ ಜನಸಾಮಾನ್ಯರಿಗೆ ಸೇವೆಯ ಫಲ ದೊರಕಲು ಸಾಧ್ಯ ಎಂದರು.
ಜನತೆ ವೈದ್ಯರನ್ನು ದೇವರಂತೆ ಕಾಣುತ್ತಾರೆ. ಆದರೆ, ವೈದ್ಯ ವೃತ್ತಿಯಲ್ಲಿ ರೋಗಿಗಳೇ ದೇವರು. ರೋಗಿಗಳಿಗೆ ಆರೋಗ್ಯ ಸೇವೆ ಒದಗಿಸಲು ಪಾರದರ್ಶಕ ಹಾಗೂ ಪ್ರಾಮಾಣಿಕವಾಗಿ ಶ್ರಮಿಸಬೇಕು. ಕೆಲವು ವೈದ್ಯರ ವರ್ತನೆಯಿಂದಾಗಿ ಶ್ರೀಸಾಮಾನ್ಯರಲ್ಲಿ ವ್ಯತಿರಿಕ್ತ ಮನೋಭಾವ ಬೆಳೆದಿರುವುದು ಕಳವಳಕಾರಿ. ಇಡೀ ವೈದ್ಯಕೀಯ ಕ್ಷೇತ್ರದಲ್ಲಿ ಆದರಣೀಯ ಗುಣಗಳನ್ನು ಅಳವಡಿಸಿಕೊಂಡು ಸೇವೆಗೆ ಪ್ರಥಮ ಆದ್ಯತೆ ನೀಡಿದಾಗಲೇ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ರಶ್ಮಿ, ಅಜಯ್ ಶಾಸ್ತ್ರಿ, ಯೋಗೀಶ್, ಹರೀಶ್, ಗಣಪತಿ, ಸದಾಶಿವ ಇತರರಿದ್ದರು.